ಹಾವೇರಿ:ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲು ಆಗಮಿಸಿದ್ದ ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ಶಿಗ್ಗಾಂವಿ-ಸವಣೂರು ಕ್ಷೇತ್ರದ ಕಾರ್ಯಕರ್ತರು ನೀವೇ ನಮ್ಮ ಕ್ಷೇತ್ರದ ಅಭ್ಯರ್ಥಿಯಾಗಬೇಕು ಎಂದು ಪಟ್ಟುಹಿಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇರುವ ಖಾಸಗಿ ಹೋಟೆಲ್‌ಗೆ ಧಾವಿಸಿದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬೆಂಬಲಿಗರು, "ನೀವು ಶಿಗ್ಗಾಂವಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಮಾನ ಮಾಡಿದ್ದೀರಿ. ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್ ಕೈ ತಪ್ಪಲು ನೀವೇ ಕಾರಣ. ಆದ್ದರಿಂದ ಸಿಎಂ ಬೊಮ್ಮಾಯಿ ವಿರುದ್ಧ ನೀವೇ ಅಭ್ಯರ್ಥಿಯಾಗಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಕಾರ್ಯಕರ್ತರನ್ನು ಸಮಾಧಾನಪಡಿಸಿ ಹೊರಗೆ ಕಳಿಸಲಾಯಿತು. ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಕೇಳದೆ, ಸ್ಥಳೀಯ ನಾಯಕರನ್ನು ಗಣನೆಗೆ ತಗೆದುಕೊಳ್ಳದೆ ಬೇರೆಯವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂದು ಅಜ್ಜಂಪೀರ್ ಖಾದ್ರಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಲೀಂ ಅಹ್ಮದ್, "ನಾನು ಅಭ್ಯರ್ಥಿಯಾಗಬೇಕು ಎನ್ನುವುದು ಕಾರ್ಯಕರ್ತರ ಒತ್ತಾಯ. ಆದರೆ ಹೈಕಮಾಂಡ್ ಯಾವ ರೀತಿ ನಿರ್ದೇಶನ ನೀಡುತ್ತೋ ಆ ರೀತಿ ನಡೆದುಕೊಳ್ಳುವೆ. ಕಾರ್ಯಕರ್ತರ ಮುಖಂಡರ ಭಾವನೆಯನ್ನು ವರಿಷ್ಠರಿಗೆ ತಿಳಿಸುತ್ತೇನೆ" ಎಂದು ಹೇಳಿದರು. ಶಿಗ್ಗಾಂವಿ ಕ್ಷೇತ್ರದಲ್ಲಿನ ಕಾಂಗ್ರೆಸ್ ಭಿನ್ನಮತದ ಬಗ್ಗೆ ಮಾತನಾಡಿ, "ಕ್ಷೇತ್ರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ, ಅದನ್ನು ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.