ಹಾವೇರಿ :ನಗರೀಕರಣ, ಆಧುನಿಕತೆಯ ನಡುವೆ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಅಕ್ಕಪಕ್ಕದ ಸಾವು ನೋವುಗಳಿಗೆ ಜನನ ಮರಣಗಳಿಗೆ ಸಹ ಸ್ಪಂದಿಸದ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ಹಾವೇರಿ ನಗರದಲ್ಲೊಬ್ಬರು ಆಪದ್ಬಾಂಧವರಿದ್ದಾರೆ. ಅಬ್ದುಲ್ ಖಾದರ್ ಹೆಸರಿನ ಇವರು ನಗರದಲ್ಲಿ ಎಲ್ಲಿಯೇ ಅಪಘಾತಗಳಾಗಲಿ, ಅನಾಥ ಶವ ಪತ್ತೆಯಾದರೆ ಕ್ಷಣಾರ್ಧದಲ್ಲಿ ಅಲ್ಲಿಗೆ ಹಾಜರಾಗುತ್ತಾರೆ.
ಅನಾಥ ಶವದ ಅಂತ್ಯಕ್ರಿಯೆ ನಡೆಸುವ ಅಬ್ದುಲ್: ಪೊಲೀಸರಿಗೆ ಮಾಹಿತಿ ತಿಳಿಸಿ ಅನಾಥ ಶವಗಳನ್ನು ತೆಗೆದುಕೊಂಡು ಬಂದು ಹಾವೇರಿಯ ಶವಾಗಾರದಲ್ಲಿರಿಸುತ್ತಾರೆ. ಅನಾಥ ಶವಕ್ಕೆ ಯಾರಾದರೂ ವಾರಸುದಾರರು ಇದ್ದರೆ, ಅವರಿಗೆ ಪೋನ್ ಮಾಡಿ ವಿಷಯ ತಿಳಿಸುತ್ತಾರೆ. ಬಹುತೇಕ ಅನಾಥ ಶವಗಳಿಗೆ ವಾರಸುದಾರರು ಇರುವುದು ಕಡಿಮೆ. ಈ ಕುರಿತಂತೆ ಪೊಲೀಸ್ ಇಲಾಖೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅನಾಥ ಶವದ ಅಂತ್ಯಕ್ರಿಯೆಯನ್ನ ಅಬ್ದುಲ್ ನೆರವೇರಿಸುತ್ತಾರೆ.
ಕಳೆದ 9 ವರ್ಷಗಳಿಂದ ಇವರ ಈ ಅನಾಥ ಸೇವೆ ನಡೆಯುತ್ತಿದೆ. ಹಾವೇರಿ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶವ ಪತ್ತೆಯಾದರೆ ಅಲ್ಲಿಗೆ ಧಾವಿಸುವ ಖಾದರ್ ಮುಂದಿನ ಕಾರ್ಯ ಕೈಗೊಳ್ಳುತ್ತಾರೆ. ಈ ರೀತಿ ಕಳೆದ 9 ವರ್ಷದಲ್ಲಿ 500 ಕ್ಕೂ ಅಧಿಕ ಅನಾಥ ಶವಗಳಿಗೆ ಅಬ್ದುಲ್ ಖಾದರ್ ಮುಕ್ತಿ ನೀಡಿದ್ದಾರೆ. ಈ ರೀತಿ ಸಾವನ್ನಪ್ಪಿದವರ ಸಂಬಂಧಿಕರ ಮನೆಗೆ ಶವ ತೆಗೆದುಕೊಂಡು ಹೋದಾಗ ಅವರ ಪ್ರೀತಿ ಕಂಡು ಸೇವೆ ಮಾಡುವ ಉತ್ಸಾಹ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅಬ್ದುಲ್.
ತಂದೆ ತೀರಿಕೊಂಡಾಗ ಸಾಕಷ್ಟು ನೋವು ಅನುಭವಿಸಿದ ಅಬ್ದುಲ್: ಅಬ್ದುಲ್ಗೆ ನಾಲ್ಕು ಜನ ಒಡಹುಟ್ಟಿದವರಿದ್ದು, ತನ್ನ ತಂದೆಯನ್ನ ಅನಾರೋಗ್ಯದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಸಾಕಷ್ಟು ಕಷ್ಟಪಟ್ಟೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಂದೆ ತೀರಿಕೊಂಡಾಗ ಸಾಕಷ್ಟು ನೋವು ಅನುಭವಿಸಿದೆ. ಅಂದಿನಿಂದಲೇ ಜನರಿಗೆ, ಅನಾಥರಿಗೆ ಈ ರೀತಿಯ ಸಹಾಯ ಮಾಡಲು ನಿರ್ಧರಿಸಿದೆ ಎನ್ನುತ್ತಾರೆ ಅಬ್ದುಲ್. ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನ ಆಸ್ಪತ್ರೆಗೆ ಕರೆತರುವ ಅಬ್ದುಲ್ ಖಾದರ್ ಹೆಚ್ಚಿನ ಚಿಕಿತ್ಸೆಗಳಿಗೆ ದೂರದ ದಾವಣಗೆರೆ ಹುಬ್ಬಳ್ಳಿ ಆಸ್ಪತ್ರೆಗಳಿಗೆ ರೋಗಿಗಳನ್ನ ಕಳುಹಿಸಿಕೊಡುತ್ತಾರೆ.