ಹಾವೇರಿ:ಯುವಕನೊಬ್ಬ ಪ್ರೀತಿಸಿದ ಯುವತಿಯೊಂದಿಗೆ ಪರಾರಿಯಾಗಿದ್ದಕ್ಕೆ ಆತನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದು, ಈ ಬಗ್ಗೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮನೆಯಿಂದ ಯುವತಿ ಕಾಣಿಯಾಗಲು ಯುವಕನ ಸೋದರ ಮಾವನೇ ಕಾರಣ ಎಂದು ಆರೋಪಿಸಿ ಯುವತಿಯ ಕಡೆಯವರು ಹಲ್ಲೆಗೆ ಮುಂದಾಗಿದ್ದಾರೆ. ''ಪ್ರಕರಣ ಸಂಬಂಧ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಮುದೇನೂರು ಮಾಹಿತಿ ನೀಡಿದ್ದಾರೆ.
''ಹುಡುಗಿಯ ಕಡೆಯವರು ರಾಣೆಬೆನ್ನೂರಿನ ಜಾನುವಾರ ಮಾರುಕಟ್ಟೆ ಬಳಿ ಕರೆತಂದ ತನ್ನನ್ನು ಮನಬಂದಂತೆ ಥಳಿಸಿದ್ದಾರೆ. ಜೀವ ಬೆದರಿಕೆ ಹಾಕಿ ಇಲ್ಲಿಯ ಪೊಲೀಸ್ ಠಾಣೆ ಎದುರು ಬಿಟ್ಟು ಹೋಗಿದ್ದಾರೆ. ತನಗೆ ಅವರಿಂದ ಜೀವ ಬೆದರಿಕೆಯಿದ್ದು ಗಲಾಟೆ ವೇಳೆ ನನ್ನ ಪತ್ನಿ, ತಂದೆ-ತಾಯಿ ಮೇಲೆಯೂ ಹಲ್ಲೆ ನಡೆದಿದೆ'' ಎಂದು ಥಳಿತಕ್ಕೊಳಗಾದ ವ್ಯಕ್ತಿ ಆರೋಪ ಮಾಡಿದ್ದಾನೆ. ಗಾಯಾಳುವನ್ನು ಇದೀಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ರಾತ್ರಿ ನಾಪತ್ತೆಯಾಗಿದ್ದ ಯುವಕ - ಯುವತಿ ಮದುವೆಯಾಗಿದ್ದು, ನೇರವಾಗಿ ಹಾವೇರಿ ಎಸ್ಪಿ ಕಚೇರಿಗೆ ಆಗಮಿಸಿದ್ದಾರೆ. ''ತಮಗೆ ಜೀವ ಬೆದರಿಕೆ ಇದೆ. ಹಾಗಾಗಿ ಭದ್ರತೆ ನೀಡುವಂತೆ'' ಜೋಡಿ ಎಂದು ಮನವಿ ಮಾಡಿದೆ. ''ನಾವಿಬ್ಬರು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದೆವು. ಯುವತಿಯ ಕಡೆಯವರು ಬೇರೆ ಹುಡುಗನ ನೋಡಿ ಮದುವೆ ಮಾಡಲು ಮುಂದಾಗಿದ್ದರಿಂದ ನಾವು ತಪ್ಪಿಸಿಕೊಂಡು ಹೋಗಿ ಮದುವೆಯಾಗಿದ್ದೇವೆ. ನಾನು ನಾಪತ್ತೆಯಾಗುತ್ತಿದ್ದಂತೆ ಯುವತಿ ಸಂಬಂಧಿಕರು ನನ್ನ ಸೋದರ ಮಾವನ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ನೀಡಿ'' ಎಂದು ನೂತನ ದಂಪತಿ ಎಸ್ಪಿ ಅಂಶುಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.