ರಾಣೆಬೆನ್ನೂರು (ಹಾವೇರಿ):ಕಳೆದೊಂದು ವರ್ಷದಿಂದ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯ ಕುಟುಂಬಗಳು ಕುಡಿಯುವ ನೀರು, ವಿದ್ಯುತ್ ಮತ್ತಿತರ ಕನಿಷ್ಠ ಮೂಲಸೌಕರ್ಯಗಳ ಕೊರತೆಯಿಂದ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ರಾಣೆಬೆನ್ನೂರ ತಾಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ 80 ಕುಟುಂಬಗಳು ವಾಸಿಸುತ್ತಿವೆ. ಇತ್ತೀಚೆಗೆ ಕುಟುಂಬದ ಜನಸಂಖ್ಯೆ ಹೆಚ್ಚಾದ ಕಾರಣ ಚಿಕ್ಕ ಮನೆಯಲ್ಲಿ ವಾಸಿಸಲು ಸಾಧ್ಯವಾಗದೆ ಊರ ಹೊರಗೆ ಸಮುದಾಯಕ್ಕೆ ಮೀಸಲಿಟ್ಟ ಜಾಗದಲ್ಲಿ ಇವರು ಜೀವನ ಸಾಗಿಸುತ್ತಿದ್ದಾರೆ.
ಕನಿಷ್ಠ ಮೂಲಸೌಕರ್ಯಗಳ ಕೊರತೆಯಲ್ಲಿ ಪ.ಜಾತಿ ಕುಟುಂಬಗಳ ಜೀವನ ಸರ್ವೇ ನಂ 26/3 ರಲ್ಲಿ 3 ಎಕರೆ 24 ಗುಂಟೆ ಜಾಗವನ್ನು ಸರ್ಕಾರದ ನಿಯಮಾವಳಿ ಪ್ರಕಾರ, ಈ ಸಮುದಾಯಕ್ಕೆಂದು ಮೀಸಲಿಡಲಾಗಿದೆ. ಆದರೆ ಊರಿನ ಗ್ರಾಮಸ್ಥರು ಈ ಜಾಗ ಎಲ್ಲ ಸಮುದಾಯಕ್ಕೂ ಸೇರಿದೆ ಎಂದು ತಕರಾರು ಮಾಡುತ್ತಿದ್ದಾರೆ. ತಾಲೂಕು ಆಡಳಿತ ಇಲ್ಲಿಯವರೆಗೂ ಇಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಪಟ್ಟಾ ನೀಡುತ್ತಿಲ್ಲ ಎಂದು ಸಮುದಾಯ ಮುಖಂಡರು ಆರೋಪಿಸುತ್ತಿದ್ದಾರೆ.
ಕುಡಿಯುವ ನೀರು, ವಿದ್ಯುತ್ ಸಂಪರ್ಕವೂ ಇಲ್ಲಿಲ್ಲ. ಜೋಪಡಿ ಹಾಕಿಕೊಂಡಿದ್ದು ಮಳೆ ಬಂದಾಗ ನೀರು ಸೋರುತ್ತದೆ. ಮಕ್ಕಳು ಚಳಿಯಲ್ಲಿ ಸಂಕಟ ಅನುಭವಿಸುತ್ತಾರೆ. ಹೀಗಿದ್ದರೂ ತಾಲೂಕು ಆಡಳಿತ ಮತ್ತು ಗ್ರಾ.ಪಂಚಾಯತಿ ಅಧಿಕಾರಿಗಳು ನಮ್ಮ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ ಎಂದು ಜಗದೀಶ ಮುದೇನೂರು ತಮ್ಮ ಅಳಲು ತೋಡಿಕೊಂಡರು.