ರಾಣೇಬೆನ್ನೂರು: ಊರಿನಲ್ಲಿ ದೇಗುಲ ನಿರ್ಮಿಸಿ ದೇವರನ್ನು ಪೂಜಿಸುವುದು ಸಾಮಾನ್ಯ. ಆದ್ರೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ದೇಶಭಕ್ತಿ ಜಾಗೃತಿಗೊಳಿಸಲು ಭಾರತ ಮಾತೆ ಹೆಸರಿನಲ್ಲಿ ಮಂದಿರ ನಿರ್ಮಿಸಿ, ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದೆ.
ಹೌದು, ದಕ್ಷಿಣ ಭಾರತದಲ್ಲೇ ಏಕೈಕ ಭಾರತ ಮಾತೆ ಮಂದಿರವನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಮಾರುತಿ ನಗರದಲ್ಲಿ ನಿರ್ಮಿಸಿ ಪ್ರತಿ ನಿತ್ಯವೂ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರಾದ ಜಿ.ಪಿ.ಮಹಾನುಭಾವಿ ಮಠ ಅವರು ದೇಶಾಭಿಮಾನಿ ಜನತಾ ಬಜಾರದ ಹತ್ತಿರ ಧ್ವಜಾರೋಹಣ ಮಾಡಿ, ನಗರದಲ್ಲಿ ಪ್ರಭಾತ ಪೇರಿ ಮಾಡುತ್ತಿದ್ದರು. ನಂತರ ಇದನ್ನು ಸುಭಾಷ ಸರ್ಕಲ್‌ಗೆ ಸ್ಥಳಾಂತರಿಸಿದರು. 1988ರಲ್ಲಿ ಭಾರತ ಮಾತೆಯ ಮೂರ್ತಿ ನಿರ್ಮಿಸಿ, ಅದನ್ನು ಎತ್ತಿನ ಬಂಡಿಯಲ್ಲಿರಿಸಿ ಮೆರವಣಿಗೆ ನಡೆಸಿದರು. ನಂತರ ಹಲವು ವರ್ಷಗಳವರೆಗೆ ಇದೇ ಆಚರಣೆ ನಡೆದುಕೊಂಡು ಬಂದಿತು. 2006 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಿ.ಪಿ.ಮಹಾನುಭಾವಿ ಮಠ ನಿಧನದ ನಂತರ ಅವರ ಇಚ್ಛೆಯಂತೆ ಭಾರತ ಮಾತೆಯ ಮಂದಿರ ನಿರ್ಮಿಸುವ ಸಂಕಲ್ಪ ಮಾಡಲಾಯಿತು. ಅದರಂತೆ ಮಾರುತಿ ನಗರದಲ್ಲಿ ಮಂದಿರ ಸ್ಥಾಪನೆಗೆ ನಿರ್ಧರಿಸಲಾಯಿತು.