ರಾಣೇಬೆನ್ನೂರು :ಬಡತನ, ಅಂಧತ್ವ ಮೀರಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ 548 ಅಂಕ ಗಳಿಸುವ ಮೂಲಕ ನಗರದ ಅಂಧ ವಿದ್ಯಾರ್ಥಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಪಿಯುಸಿಯಲ್ಲಿ 548 ಅಂಕ ಗಳಿಸಿ ಮಾದರಿಯಾದ ವಿದ್ಯಾರ್ಥಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುವ ಕುಟುಂಬದಲ್ಲಿ ಜನಿಸಿರುವ ಗಣೇಶನಿಗೆ ಹುಟ್ಟಿನಿಂದಲೇ ಕಣ್ಣು ಕಾಣಿಸುತ್ತಿರಲಿಲ್ಲ. ತಂದೆ ಬಸವರಾಜಪ್ಪ ತಾಯಿ ಗಂಗಮ್ಮ ಮಗನನ್ನು ವಿದ್ಯಾವಂತನಾಗಿ ಮಾಡಬೇಕು ಎಂಬ ಆಸೆಯಿಂದ ಕಷ್ಟಪಟ್ಟು ದುಡಿದು ಮಗನ ವಿದ್ಯಾಭ್ಯಾಸಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ.
ಗಣೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದಿದ್ದು, ಎಸ್ಎಸ್ಎಲ್ಸಿಯಲ್ಲಿ ಶೇ.40 ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದ. ನಂತರ ರಾಣೇಬೆನ್ನೂರಿನ ಲಕ್ಷ್ಮಣ ನಾಯಕ ಪದವಿ ಪೂರ್ವ ಕಾಲೇಜು ಸೇರಿದ ಗಣೇಶ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದಿದ್ದಾನೆ.
ಈ ಸಾಧನೆ ಕುರಿತು ಮಾತನಾಡಿದ ಗಣೇಶ್, ಎರಡು ವರ್ಷಗಳ ವಿದ್ಯಾಭ್ಯಾಸದಲ್ಲಿ ನನಗೆ ಬೆನ್ನೆಲುಬಾಗಿ ನನ್ನ ತಂದೆ-ತಾಯಿ ಮತ್ತು ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ, ಸ್ನೇಹಿತರು, ಉಪನ್ಯಾಸಕರು ಕಲಿಕೆಗೆ ನನಗೆ ಉತ್ತಮ ಪ್ರೋತ್ಸಾಹ ನೀಡಿದ್ದಾರೆ ಎಂದು ನೆನೆಪಿಸಿಕೊಳ್ಳುತ್ತಾರೆ.