ಹಾವೇರಿ: ಹತ್ತು ಹಲವು ಕೌತುಕಗಳಿರುವ ಜಿಲ್ಲೆ ಹಾವೇರಿ. ಅಂತಹ ಕುತೂಹಲಗಳಲ್ಲೊಂದು ಬ್ಯಾಡಗಿ ತಾಲೂಕಿನ ಗುಡ್ಡದಮಲ್ಲಾಪುರದಲ್ಲಿರುವ ಮೂಕಪ್ಪಶ್ರೀಗಳು. ವಿಶ್ವದಲ್ಲಿಯೇ ವಿಶೇಷವಾದ ಸಂಪ್ರದಾಯ ಇಲ್ಲಿದೆ.
ಇಲ್ಲಿಯ ಹುಚ್ಚೇಶ್ವರಮಠಕ್ಕೆ ಕಳೆದ 8 ಶತಮಾನಗಳಿಂದ ಪೀಠಾಧಿಕಾರಿಗಳನ್ನಾಗಿ ವೃಷಭರೂಪಿ ಸ್ವಾಮೀಜಿಗಳನ್ನು ನೇಮಿಸಲಾಗಿದೆ. ಈ ಹಿಂದೆ ಶ್ರೀಶೈಲದಿಂದ ಆಗಮಿಸಿದ ಹುಚ್ಚೇಶ್ವರ ಶ್ರೀಗಳು ಲಿಂಗೈಕ್ಯರಾಗುವ ಮುನ್ನ ತಾವು ಸಾಕಿದ್ದ ಬಸವಣ್ಣನನ್ನೇ ಪೀಠಾಧಿಕಾರಿಗಳಾಗಿ ನೇಮಿಸುವಂತೆ ಆದೇಶಿಸಿದ್ದರಂತೆ. ಅಂದಿನಿಂದ ಇಲ್ಲಿಯವರೆಗೆ ಇಲ್ಲಿ ವೃಷಭರೂಪಿ ಸ್ವಾಮೀಜಿಗಳೇ ಪೀಠಾಧಿಪತಿಗಳು. ಈ ಸ್ವಾಮೀಜಿಗಳನ್ನು ಸ್ಥಳೀಯವಾಗ ಮೂಕಪ್ಪ ಸ್ವಾಮೀಜಿಗಳು ಎಂದು ಕರೆಯಲಾಗುತ್ತದೆ.
ಮಠಕ್ಕೆ ಯಾವುದೇ ಜಾತಿ ಬೇಧವಿಲ್ಲ. ಇಲ್ಲಿ ಎಲ್ಲಾ ಧರ್ಮೀಯರು ಪಾಲ್ಗೊಳ್ಳುವರು. ಮೂಕಪ್ಪಶ್ರೀಗಳನ್ನು ಕಂಡರೆ ಸಾಕು ತಮ್ಮ ಸಮಸ್ಯೆ ಬಗೆಹರಿದಂತೆ ಎನ್ನುವ ನಂಬಿಕೆ ಭಕ್ತರದ್ದು. ಹಾವೇರಿ, ಶಿವಮೊಗ್ಗ, ದಾವಣಗೆರೆ, ಧಾರವಾಡ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಈ ಸ್ವಾಮೀಜಿಗಳ ಭಕ್ತರಿದ್ದಾರೆ. ಈ ರೀತಿಯ ಸ್ವಾಮೀಜಿಗಳನ್ನು ನೋಡುವುದೇ ಒಂದು ಕೌತುಕ ಎನ್ನುತ್ತಾರೆ ಸ್ಥಳೀಯರು.
ಹಾವೇರಿಯ ಈ ಸ್ಥಳದಲ್ಲಿ ಕೌತುಕ: ಇಬ್ಬರು ಬಸವಣ್ಣರೇ ಇಲ್ಲಿನ ಪೀಠಾಧಿಪತಿಗಳು ಇಬ್ಬರು ಮೂಕಪ್ಪ ಶ್ರೀಗಳು: ಮಠದಲ್ಲಿ ಹಿರಿಯ ಮತ್ತು ಕಿರಿಯ ಶ್ರೀಗಳೆಂದು ಎರಡು ಶ್ರೀಗಳನ್ನು ಪೀಠಾಧಿಕಾರಿಯನ್ನಾಗಿ ಮಾಡಲಾಗುತ್ತದೆ. ಹಿರಿಯ ಶ್ರೀಗಳು ಲಿಂಗೈಕ್ಯರಾದರೆ ಕಿರಿಯ ಶ್ರೀಗಳನ್ನು ಹಿರಿಯ ಶ್ರೀಗಳನ್ನಾಗಿ ನೇಮಕ ಮಾಡಲಾಗುತ್ತೆ. ಲಿಂಗೈಕ್ಯರಾದ ಸ್ವಾಮೀಜಿಗಳೇ ಕಿರಿಯ ಸ್ವಾಮೀಜಿಗಳಾಗಿ ಮತ್ತೆ ಜನಿಸುತ್ತಾರೆ ಎಂಬ ನಂಬಿಕೆ ಇಲ್ಲಿದೆ. ಶ್ರೀಗಳು ಲಿಂಗೈಕ್ಯರಾದ ನಂತರ 9 ತಿಂಗಳು ನಾಲ್ಕು ದಿನಕ್ಕೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನಿಸುತ್ತಾರಂತೆ. ಅದಕ್ಕೆ ಅವರದೇ ಆದ ಕೆಲವು ನಿಯಮಗಳಿವೆ. ಈ ರೀತಿ ಜನಿಸಿದ ಕರುವನ್ನು ಮಠದ ಕಿರಿಯ ಶ್ರೀಗಳನ್ನಾಗಿ ಮಾಡಲಾಗುತ್ತೆ. ಶ್ರೀಗಳು ಲಿಂಗೈಕ್ಯರಾದರೆ ಮನುಷ್ಯರೂಪಿ ಸ್ವಾಮೀಜಿಗಳ ಅಂತ್ಯಕ್ರಿಯೆಯಂತೆ ವೃಷಭರೂಪಿ ಶ್ರೀಗಳ ಅಂತ್ಯಕ್ರಿಯೆ ನಡೆಸಲಾಗುತ್ತದೆ.
ಇಬ್ಬರು ಬಸವಣ್ಣರೇ ಇಲ್ಲಿನ ಪೀಠಾಧಿಪತಿಗಳು ಹೀಗೆ ಬನ್ನಿ:ಇಲ್ಲಿಗೆ ವರ್ಷದ ಯಾವ ದಿನವಾದರೂ ಪ್ರವಾಸಿಗರು ಭೇಟಿ ನೀಡಬಹುದು. ವರ್ಷದ ಸುಗ್ಗಿಯ ದಿನಗಳಲ್ಲಿ ಸ್ವಾಮೀಜಿಗಳು ಭಕ್ತರ ಮನೆಗೆ ವಿಶೇಷ ಪೂಜೆಗಾಗಿ ತೆರಳುತ್ತಾರೆ. ಉಳಿದಂತೆ ಮಠದಲ್ಲಿ ಶ್ರೀಗಳ ದರ್ಶನ ಮಾಡಬಹುದು. ಇಲ್ಲಿಗೆ ಬರುವವರು ಬ್ಯಾಡಗಿಗೆ ಬಂದು ಅಲ್ಲಿಂದ ಗುಡ್ಡದಮಲ್ಲಾಪುರಕ್ಕೆ ತೆರಳಬಹುದು. ಇಲ್ಲದಿದ್ದರೆ ಹಾವೇರಿಗೆ ಬಂದು ತೆರಳಲು ರಸ್ತೆ ಮಾರ್ಗವಿದೆ. ವರ್ಷದಲ್ಲಿ 8 ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯುತ್ತಾರೆ. ಜಾತ್ರೆಯ ದಿನಗಳಲ್ಲಿ ಭಕ್ತಸಾಗರವೇ ಹರಿದುಬರುತ್ತದೆ.
ಇದನ್ನೂ ಓದಿ:ಕಾರ್ತಿಕ ಮಾಸದಲ್ಲಿ ಭೂಮಿ ನಡುಗೀತು, ಮೇಘ ಅಬ್ಬರಿಸೀತು: ಕೋಡಿಮಠ ಶ್ರೀ