ಹಾವೇರಿ:ಮಂಜುಳಾ ಕೊಪ್ಪದ್ ಅಂದರೆ ಹಾವೇರಿಯ ಗಾನಕೋಗಿಲೆ ಎಂದೇ ಹೆಸರು ಪಡೆದುಕೊಂಡಿದ್ದಾರೆ. ಇವರು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಸಂಗೀತ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ಗಾಯಕಿಯಾಗಿದ್ದಾರೆ. ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ಮಂಜುಳಾ ಕೊಪ್ಪದ್ ಅವರು ತಮ್ಮ ಗಾನ ಸುಧೆಯಿಂದಲೇ ಮನೆ ಮಾತಗಿದ್ದಾರೆ. ಗಾಯಕಿ ಮಂಜುಳಾಗೆ ವಿವಿಧ ಸಂಘ, ಸಂಸ್ಥೆಗಳು ನೂರಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಮಂಜುಳಾ ಅವರ ಸಂಗೀತ ಯಾನ ಆರಂಭವಾಗಿದ್ದು 2020 ರಲ್ಲಿ. ಅಂದಿನಿಂದ ಮೂರು ವರ್ಷಗಳ ಕಾಲ ನೂರಾರು ಹಾಡುಗಳನ್ನು ಹಾಡಿ ಸಂಗೀತ ಪ್ರಿಯರ ಮನ ಗೆದಿದ್ದಾರೆ. ಸಾಮಾಜಿಕ ಜಾಲತಾಣದಿಂದ ಆರಂಭವಾದ ಇವರ ಖ್ಯಾತಿ ಹಲವು ಸಭೆ ಸಮಾರಂಭಗಳಿಗೆ ಕರೆದೊಯ್ಯಿತು. ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಾಡಿನ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಗಾಯಕಿ ಮಂಜುಳಾಗೆ ಇದೀಗ ಹಾಡಲಾಗದ ಪರಿಸ್ಥಿತಿ ಉಂಟಾಗಿದೆ.
ಇದಕ್ಕೆ ಕಾರಣ ಅವರಿಗೆ ಕಳೆದ ಎರಡು ವರ್ಷಗಳಿಂದ ಕಾಣಿಸಿಕೊಂಡಿರುವ ಕ್ಯಾನ್ಸರ್. ರಾಜ್ಯದೆಲ್ಲಡೆ ಹೆಸರು ಮಾಡಿದ್ದ ಮಂಜುಳಾಗೆ ಸ್ತನ ಕ್ಯಾನ್ಸರ್ ಇರುವುದರಿಂದ ಹಾಡು ಹಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಮಂಜುಳಾ ಈಗಾಗಲೇ 12 ಬಾರಿ ಕೀಮೋಥೆರಪಿಗೆ ಒಳಗಾಗಿದ್ದಾರೆ. ಕ್ಯಾನ್ಸರ್ ಎರಡನೇಯ ಹಂತದಲ್ಲಿದ್ದು, ಸೂಕ್ತ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದರೆ ಹಿಂದಿನಂತೆ ಹಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡ ಕ್ಯಾನ್ಸರ್ ಚಿಕಿತ್ಸೆಗಾಗಿ ಮಂಜುಳಾ 6 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಅಲ್ಲದೇ, ಪರಿಚಿತರ ಮತ್ತು ಸಂಬಂಧಿಕರಿಂದ ನೆರವು ಪಡೆದಿದ್ದಾರೆ. ಆದರೆ, ಚಿಕಿತ್ಸೆಗೆ ಹಣ ಸಾಕಾಗುತ್ತಿಲ್ಲ, ಇನ್ನು 25 ರೇಡಿಯೇಷನ್‌ಗಳಿಗಾಗಿ ಎರಡು ಲಕ್ಷ ರೂಪಾಯಿಗೂ ಅಧಿಕ ಹಣ ಮಂಜುಳಾ ಅವರಿಗೆ ಬೇಕಾಗಿದೆ. ನಿತ್ಯದ ಔಷಧ ಮತ್ತು ಚಿಕಿತ್ಸೆಗೆ ಎಂದು 2 ಲಕ್ಷ ರೂ. ಗೂ ಅಧಿಕ ಹಣ ಮಂಜುಳಾಗೆ ಬೇಕಾಗಿದೆ.