ಹಾವೇರಿ: ರಾಣೆಬೆನ್ನೂರು ಪಟ್ಟಣದ ರಂಗನಾಥ ನಗರದ 75 ವರ್ಷದ ವೃದ್ಧೆ ಪುಟ್ಟವ್ವ ಕೊಟ್ಟೂರು ಎಂಬುವವರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ.
ಹಾವೇರಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪುಟ್ಟವ್ವ ದಯಾಮರಣ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪುಟ್ಟವ್ವ ಅವರಿಗೆ 11 ಜನ ಮಕ್ಕಳು ಅದರಲ್ಲಿ ಏಳು ಜನ ಗಂಡುಮಕ್ಕಳು ನಾಲ್ಕು ಜನ ಹೆಣ್ಣುಮಕ್ಕಳು. 20 ಕ್ಕೂ ಅಧಿಕ ಮೊಮ್ಮಕ್ಕಳಿರುವ ಪುಟ್ಟವ್ವಳಿಗೆ 28 ಎಕರೆ ಜಮೀನು, 8 ಮನೆಗಳಿವೆ. ಪತಿ ಹನುಮಂತಪ್ಪ ತೀರಿಹೋದ ನಂತರ ಪುಟ್ಟವ್ವ ಅವರನ್ನು ಮಕ್ಕಳು ಮತ್ತು ಮೊಮ್ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಂತೆ. ಪುಟ್ಟವ್ವ ಅವರ ಕಿರಿಯ ಮಗ ಅಲ್ಪಸ್ವಲ್ಪ ಮುತುವರ್ಜಿ ವಹಿಸಿದರೆ ಉಳಿದ ಮಕ್ಕಳು ಅವನನ್ನೇ ಹೊಡೆಯುತ್ತಾರಂತೆ. ಅದಕ್ಕಾಗಿ ಕಿರಿಯಮಗ ಸಹ ಉಳಿದ ಮಕ್ಕಳಿಂದ ಹೊಡೆಸಿಕೊಂಡು ತಾಯಿ ಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಯಾಮರಣ ಕೋರಿ ಪತ್ರ ಬರೆದ ವೃದ್ಧೆ ಕುರಿತು ಅಧಿಕಾರಿಗಳ ಮಾಹಿತಿ ಅಧಿಕ ರಕ್ತದ ಒತ್ತಡ, ಮಧುಮೇಹ, ಹೃದಯ ಸಮಸ್ಯೆ ಹೊಂದಿರುವ ಪುಟ್ಟವ್ವರಿಗೆ ಸರಿಯಾಗಿ ನಿಲ್ಲಲು ಸಹ ಬರುತ್ತಿಲ್ಲ. ಆಸ್ತಿ ಮಾರಾಟ ಮಾಡಿ ನೆಮ್ಮದಿಯ ಜೀವನ ಸಾಗಿಸಲು ಸಹ ಮಕ್ಕಳು ಬಿಡುತ್ತಿಲ್ಲವಂತೆ. ಇನ್ನು, ಹೆಣ್ಣುಮಕ್ಕಳ ಮನೆಗೆ ಹೋದರೆ ನೀನು ನಮ್ಮ ಸಂಸಾರ ಹಾಳು ಮಾಡಲು ಬಂದಿದೆಯಾ ಎಂದು ಬೈಯ್ಯುತ್ತಾರಂತೆ. ಇದರಿಂದ ಬೇಸತ್ತ ಪುಟ್ಟವ್ವ ಕೆಲಬಾರಿ ಅಕ್ಕಪಕ್ಕದ ಮನೆಯವರ ಕಡೆಯಿಂದ ಆಹಾರ ಪಡೆದು ಜೀವನ ನಡೆಸುತ್ತಿದ್ದಾರೆ. ಇದರಿಂದ ನೊಂದ ಅವರು ದಯಾಮರಣ ಕೋರಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.
ಈ ಕುರಿತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಪುಟ್ಟವ್ವರ ಸಮಸ್ಯೆ ಆಲಿಸಿದ ಅಧಿಕಾರಿಗಳು ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಅಲ್ಲದೆ ತಮಗೆ ಯಾವುದೇ ತೊಂದರೆ ಇಲ್ಲದಿದ್ದರೆ ವೃದ್ಧಾಶ್ರಮಕ್ಕೆ ಸೇರಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ