ಹಾವೇರಿ:ಪರಿಸರ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಇಟಾವಾ ನಗರದ ರಾಬಿನಸಿಂಗ್ ಸೈಕಲ್ ಮೇಲೆ ದೇಶ ಪರ್ಯಟನೆ ಕೈಗೊಂಡಿದ್ದಾರೆ. 2022 ಆಕ್ಟೋಬರ್ 6 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿರುವ ಇವರ ಸೈಕಲ್ ಯಾತ್ರೆ ಈಗಾಗಲೇ 26 ಸಾವಿರ ಕಿಲೋ ಮೀಟರ್ ಪ್ರವಾಸ ಪೂರ್ಣಗೊಂಡಿದೆ. ಸೈಕಲ್ ಜಾಥಾ ಆರಂಭಿಸಿ ಇಂದಿಗೆ 440 ದಿನವಾಗಿದ್ದು, ಈ ದಿನ ಹಾವೇರಿಗೆ ಆಗಮಿಸಿದ್ದಕ್ಕೆ ರಾಬಿನಸಿಂಗ್ ಸಂತಸ ವ್ಯಕ್ತಪಡಿಸಿದರು.
ತಮಿಳನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸೋಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ದೆಹಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಂಚರಿಸಿದ್ದಾರೆ. ಕೆಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹ ರಾಬಿನಸಿಂಗ್ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಆರಂಭದಲ್ಲಿ ದಿನಕ್ಕೆ 70 ರಿಂದ 80 ಕೀಮೀಟರ್ ಸೈಕಲ್ ತುಳಿಯುತ್ತಿದ್ದ ರಾಬಿನಸಿಂಗ್ ಈಗ ದಿನಕ್ಕೆ 100 ರಿಂದ 110 ಕೀಮೀಟರ್ ಸೈಕಲ್ ತುಳಿಯುತ್ತಿದ್ದಾರೆ.
ಕನ್ಯಾಕುಮಾರಿಯಿಂದ ಆರಂಭವಾಗಿರುವ ಇವರ ಸೈಕಲ ಮೇಲಿನ ದೇಶ ಪರ್ಯಟನೆ ಮಾರ್ಚ್ 11, 2024 ರಂದು ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಸಮಾರೋಪಗೊಳ್ಳಲಿದೆ. ರಾಬಿನ್‌ಸಿಂಗ್ ಉತ್ತರ ಪ್ರದೇಶದ ಇಟಾವಾ ಗ್ರಾಮದವರಾಗಿದ್ದು, ಸ್ನಾತಕೋತ್ತರ ಪದವಿಧರನಾಗಿದ್ದಾರೆ. ಗ್ರಾಮದಲ್ಲಿ ಸಾಮಾನ್ಯ ಕೃಷಿಕನಾಗಿರುವ ಅವರು ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ತಾವು ಸಂಚರಿಸುವ ಮಾರ್ಗಮಧ್ಯದಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಪ್ರಮುಖವಾಗಿ ನಿತ್ಯ ನಾವು ಬಳಸುವ ಆಮ್ಲಜನಕ, ನೀರು ಮತ್ತು ಆಹಾರದ ಬಗ್ಗೆ ರಾಬಿನ್ ಜಾಗೃತಿ ಮೂಡಿಸುತ್ತಿದ್ದಾರೆ.
ಹಾವೇರಿ ನಗರದ ಜೆ.ಹೆಚ್.ಕಾಲೇಜ್‌ಗೆ ತೆರಳಿದ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಪರಿಸರ, ಕಾಡು, ನೀರು, ವಾಯು ಮಾಲಿನ್ಯದ ಕುರಿತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.