ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಮಾಹಿತಿ ಹಾವೇರಿ : ಜಿಲ್ಲೆಯಲ್ಲಿ ತ್ರಿವಳಿ ಕೊಲೆ ನಡೆದಿದೆ. ಅಣ್ಣನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಮೈದುನ ಪರಾರಿಯಾಗಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಕೊಲೆಗೀಡಾದವರನ್ನು ಗೀತಾ ಮರಿಗೌಡ್ರು(32) ಅಕುಲ್(10) ಮತ್ತು ಅಂಕಿತಾ(7) ಎಂದು ಗುರುತಿಸಲಾಗಿದೆ. ಕುಮಾರಗೌಡ್ ಮರಿಗೌಡ್ರು ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ಕುಮಾರ್ಗೌಡ್ ತನ್ನ ಸ್ವಂತ ಅಣ್ಣ ಹೊನ್ನೇಗೌಡರ ಹೆಂಡತಿ ಮತ್ತು ಮಕ್ಕಳ ಹತ್ಯೆಗೈದು ಪರಾರಿಯಾಗಿದ್ದಾನೆ. ಕೊಲೆಯಾದ ಗೀತಾ ಅವರ ಗಂಡ ಹೊನ್ನೇಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಸ್ಥಳಕ್ಕೆ ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹೊನ್ನೇಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಹಾನಗಲ್ನಲ್ಲಿ ಅಣ್ಣ ಹೊನ್ನೇಗೌಡರ ವ್ಯವಹಾರವನ್ನು ತಮ್ಮ ಕುಮಾರ ನೋಡಿಕೊಳ್ಳುತ್ತಿದ್ದ. ಆದರೆ ಕೆಲ ದಿನಗಳ ಹಿಂದೆ ಊರಿಗೆ ಆಗಮಿಸಿದ್ದ ಅಣ್ಣ ಹೊನ್ನೇಗೌಡ ಇನ್ಮುಂದೆ ವ್ಯವಹಾರವನ್ನು ತನ್ನ ಪತ್ನಿ ಗೀತಾ ಹೆಸರಲ್ಲಿ ನಡೆಸುವಂತೆ ತಮ್ಮನಿಗೆ ತಿಳಿಸಿದ್ದರು. ವಹಿವಾಟು ತಮ್ಮನ ಬದಲು ಪತ್ನಿಯೇ ಹೆಸರಲ್ಲಿ ನಡೆಸು ಎಂದು ಹೇಳಿದ್ದಕ್ಕೆ ಬೇಸತ್ತ ಕುಮಾರಗೌಡ ಅಣ್ಣನ ಪತ್ನಿ ಮತ್ತು ಮಕ್ಕಳನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.
ದುಬೈನಲ್ಲಿರುವ ಹೊನ್ನೇಗೌಡ ಸಾಕಷ್ಟು ಹಣ ಮಾಡಿದ್ದು, ಇಷ್ಟು ದಿನ ತಮ್ಮನ ಖಾತೆಯಲ್ಲಿ ವಹಿವಾಟು ನಡೆಸಿದ್ದರು. ಈ ವರ್ಷದಿಂದ ಅತ್ತಿಗೆ ಖಾತೆಯಲ್ಲಿ ಲೆಕ್ಕ ನಿರ್ವಹಿಸುವಂತೆ ತಮ್ಮನಿಗೆ ತಿಳಿಸಿದ್ದರಿಂದ ಕುಪಿತನಾದ ತಮ್ಮ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿ ಕುಮಾರಗೌಡ ಬಂಧನಕ್ಕೆ ವಿಶೇಷ ತಂಡ ರಚಿಸಿರುವುದಾಗಿ ತಿಳಿಸಿದರು. ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಮುಂದಿನ ತನಿಖೆಯಿಂದ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್ಪಿ ತಿಳಿಸಿದರು. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣ- ಬೆಳಗಾವಿಯಲ್ಲಿ ಗಂಡನ ಹತ್ಯೆಗೈದ ಪತ್ನಿ : ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡನನ್ನು ಪತ್ನಿಯೇ ಹತ್ಯೆಗೈದಿದ್ದ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಮೃತ ವ್ಯಕ್ತಿಯನ್ನು ಬಾಬು ಕಲ್ಲಪ್ಪ ಕುರ್ಕಿ(48) ಎಂದು ಗುರುತಿಸಲಾಗಿತ್ತು. ಪತ್ನೊ ಮಹಾದೇವಿ ಕರ್ಕಿ ಕೊಲೆಗೈದ ಆರೋಪಿ.
ಮೃತ ಬಾಬು ಕಲ್ಲಪ್ಪ ಕುರ್ಕಿ ಕುಡಿತದ ಚಟಕ್ಕೆ ದಾಸನಾಗಿದ್ದನು. ಇದರಿಂದ ಪತ್ನಿ ಮಹಾದೇವಿ ಕರ್ಕಿ ಬೇಸತ್ತಿದ್ದಳು. ಈ ಸಂಬಂಧ ಪತಿಗೆ ನಿದ್ದೆ ಮಾತ್ರ ನೀಡಿ, ನಿದ್ದೆ ಬಂದ ಬಳಿಕ ಕುತ್ತಿಗೆಗೆ ಹಗ್ಗದಿಂದ ಬಿಗಿದು ಹತ್ಯೆ ಮಾಡಿದ್ದಾಳೆ. ಇದರಿಂದ ಬಾಬು ಉಸಿರುಗಟ್ಟಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿಯಲ್ಲಿ ಮಗನ ಕೊಲೆಗೈದ ತಂದೆ :ಕಳೆದ ಅಕ್ಟೋಬರ್ 29ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ತಂದೆಯೇ ಮಗನನ್ನು ಹತ್ಯೆಗೈದ ಘಟನೆ ನಡೆದಿತ್ತು. ಮನೆಯಲ್ಲಿ ತಂದೆ ಕೃಷ್ಣಯ್ಯ ಆಚಾರಿ ಎಂಬವರು ಮಲಗಿದ್ದಾಗ ಮಗ ಜಗದೀಶ್ ಆಚಾರಿ (ಮೃತ ವ್ಯಕ್ತಿ) ತಂದೆಯೊಂದಿಗೆ ಯಾವುದೋ ಕಾರಣಕ್ಕೆ ಕ್ಯಾತೆ ತೆಗೆದಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಕೃಷ್ಣಯ್ಯ ಆಚಾರಿ ಮಗ ಜಗದೀಶ್ ಆಚಾರಿ ಕುತ್ತಿಗೆಗೆ ಚೂರಿಯಿಂದ ಇರಿದಿದ್ದ. ಬಳಿಕ ಗಂಭೀರ ಗಾಯಗೊಂಡ ಜಗದೀಶ್ನನ್ನು ತಕ್ಷಣ ಮನೆಯವರೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಗದೀಶ್ ಮೃತಪಟ್ಟಿದ್ದ. ಆರೋಪಿ ಕೃಷ್ಣಯ್ಯ ಆಚಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ :ಪತ್ನಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ದಂಪತಿ ಮೇಲೆ ಹಲ್ಲೆ, ಪತಿ ಸಾವು: ಆರೋಪಿಗಳ ಬಂಧನ