ಕರ್ನಾಟಕ

karnataka

ETV Bharat / state

ಸಾಂಪ್ರದಾಯಕ ಬೇಸಾಯಕ್ಕೆ ಗುಡ್​ ಬೈ; ಡ್ರ್ಯಾಗನ್​ ಫ್ರೂಟ್​ ಬೆಳೆದು ಕೈ ತುಂಬಾ ಸಂಪಾದಿಸುವ ಹಾವೇರಿ ರೈತ - ಡ್ರ್ಯಾಗನ್​ ಪ್ರೂಟ್ ಬೇಸಾಯ

ಹಾವೇರಿಯಲ್ಲಿ ರೈತರೊಬ್ಬರು ಸಾಂಪ್ರದಾಯಿಕ ಬೇಸಾಯ ಬಿಟ್ಟು ಡ್ರ್ಯಾಗನ್​ ಫ್ರೂಟ್‌​ ಬೆಳೆದು ಉತ್ತಮ ಲಾಭಗಳಿಸುತ್ತಿದ್ದಾರೆ.

ಡ್ರ್ಯಾಗನ್​ ಪ್ರೂಟ್​ ಬೆಳೆ
ಡ್ರ್ಯಾಗನ್​ ಪ್ರೂಟ್​ ಬೆಳೆ

By ETV Bharat Karnataka Team

Published : Oct 12, 2023, 10:36 PM IST

Updated : Oct 12, 2023, 10:54 PM IST

ಡ್ರ್ಯಾಗನ್​ ಫ್ರೂಟ್ ಬೆಳೆ

ಹಾವೇರಿ:ಹಾವೇರಿ ತಾಲೂಕಿನ ಅಗಡಿ ಗ್ರಾಮದ ರೈತ ರುದ್ರಪ್ಪ ಸಣ್ಣಪ್ಪನವರ್ ಎಂಬವರು ತಮ್ಮ ತೋಟದಲ್ಲಿ ಡ್ರ್ಯಾಗನ್​ ಫ್ರೂಟ್​ ಬೆಳೆಯುವ ಮೂಲಕ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೇಸಾಯ ಮಾಡಿಕೊಂಡಿದ್ದ ಇವರು ನಷ್ಟ ಅನುಭವಿಸಿದ್ದರಂತೆ. ಆದರೆ ಕಳೆದೆರಡು ವರ್ಷದ ಹಿಂದೆ ಸರ್ಕಾರದ ನರೇಗಾ ಯೋಜನೆಯ ಲಾಭ ಪಡೆದು ಡ್ರ್ಯಾಗನ್​ ಫ್ರೂಟ್ ಬೆಳೆಯಲು ಆರಂಭಿಸಿದ್ದಾರೆ.

ಎರಡು ವರ್ಷದ ಹಿಂದೆ ಸರ್ಕಾರದ ನರೇಗಾ ಯೋಜನೆಯ ಸಹಾಯದಿಂದ ಜಮೀನಿನಲ್ಲಿ ಗುಂಡಿ ತೆಗೆದ ಇವರು ಬಸಾಪುರದ ರೈತ ಯಲ್ಲಪ್ಪ ಅವರಿಂದ ಡ್ರ್ಯಾಗನ್​ ಫ್ರೂಟ್ ಸಸಿ ತಂದು ನಾಟಿ ಮಾಡಿದ್ದರು. ಸಸಿ ನಾಟಿ ಮಾಡಿ ಕೇವಲ 8 ತಿಂಗಳಿಗೆ ತೋಟದಲ್ಲಿ ಮೊದಲ ವರ್ಷದ ಬೆಳೆ ಬಂದಿದ್ದು, 100 ಹಣ್ಣುಗಳು ಕೈ ಸೇರಿದ್ದವು. ಅವುಗಳನ್ನು ಮಠ, ಮಂದಿರಗಳು ಹಾಗು ಸಂಬಂಧಿಕರಿಗೆ ನೀಡಿದ ರುದ್ರಪ್ಪ, ಮರುವರ್ಷ ಅಧಿಕ ಇಳುವರಿ ನಿರೀಕ್ಷಿಸಿದ್ದರು. ಹಿರಿಯ ಮಗನ ಸಹಾಯದಿಂದ ಒಂದು ಎಕರೆ ಜಮೀನಿನಲ್ಲಿ ಡ್ರ್ಯಾಗನ್​ ಫ್ರೂಟ್ ಬೆಳೆಯಲು ಮುಂದಾದರು.

ಅದರಂತೆ ರುದ್ರಪ್ಪರ ನಿರೀಕ್ಷೆ ಹುಸಿಯಾಗಲಿಲ್ಲ. ಕಳೆದ ವರ್ಷ ಸುಮಾರು 25 ಕ್ವಿಂಟಲ್ ಡ್ರ್ಯಾಗನ್​ ಫ್ರೂಟ್​ ಇಳುವರಿ ಬಂದಿದೆ. ಕಡಿಮೆಯೆಂದರೂ ಎರಡು ಲಕ್ಷ ರೂಪಾಯಿ ನಿವ್ವಳ ಆದಾಯ ಇವರು ಗಳಿಸಿದ್ದರು. ಈ ವರ್ಷ ಈಗಾಗಲೇ ಸುಮಾರು 25 ಕ್ವಿಂಟಲ್ ಹಣ್ಣು ಮಾರಿದ್ದಾರೆ. ಇನ್ನೂ 25 ಕ್ವಿಂಟಲ್ ಹಣ್ಣು ಬರುವ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಕಡಿಮೆ ಎಂದರೂ 5 ಲಕ್ಷ ರೂಪಾಯಿ ಲಾಭ ಬರುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ರುದ್ರಪ್ಪ.

"ಕಳೆದ ವರ್ಷದ ಇಳುವರಿಯಲ್ಲಿ ತೋಟಕ್ಕೆ ಮಾಡಿದ ಖರ್ಚು ಈ ವರ್ಷ ವಾಪಸ್ ಬಂದಿದೆ. ಮುಂದಿನ ವರ್ಷಗಳಲ್ಲಿ ಏನೇ ಇದ್ದರೂ ಕೇವಲ ಲಾಭ ಮಾತ್ರ. ಪ್ರತಿ ವರ್ಷ ಕೋಳಿಗೊಬ್ಬರ, ಸೆಗಣಿಗೊಬ್ಬರ ಹಾಕುವುದು ಮತ್ತು ಜೀವಾಮೃತ ಉಣಿಸಿ ನಿರ್ವಹಣೆ ಮಾಡಿದರೆ ಸಾಕು. ವರ್ಷ ವರ್ಷ ಲಕ್ಷಾಂತರ ರೂಪಾಯಿ ಆದಾಯ ಗಳಿಸಬಹುದು. ಒಂದು ಬಾರಿ ಡ್ರ್ಯಾಗನ್​ ಫ್ರೂಟ್ ಹಾಕಿದರೆ ಸಾಕು, 30 ವರ್ಷ ಬೆಳೆ ಇರುತ್ತೆ. ನನಗೆ ಕೇವಲ 10 ವರ್ಷ ಬೆಳೆ ಇದ್ದರೆ ಸಾಕು, ನಾನು ಕೋಟ್ಯಧಿಪತಿಯಾಗುತ್ತೇನೆ. ಸಾಂಪ್ರದಾಯಕ ಬೆಳೆಗಳನ್ನು ಬೆಳೆಯುತ್ತಿದ್ದ ನನಗೆ ಮೈಮೇಲೆ ಹಾಕಿಕೊಳ್ಳಲು ಬಟ್ಟೆಯೂ ಇರುತ್ತಿರಲಿಲ್ಲ. ಈಗ ಹೊಟ್ಟೆ, ಬಟ್ಟೆ ಎಲ್ಲವೂ ಚೆನ್ನಾಗಿದೆ" ಎಂದು ಹೇಳಿದರು.

ರುದ್ರಪ್ಪರ ಇಬ್ಬರು ಮಕ್ಕಳಲ್ಲಿ ಓರ್ವ ಇಂಜನಿಯರ್​ ಓದಿದ್ದು, ಅವರೂ ಸಹ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮಗ ಬಸವರಾಜ್ ಮಾತನಾಡಿ, "ವರ್ಷದಿಂದ ವರ್ಷಕ್ಕೆ ಹಾವೇರಿ ಜಿಲ್ಲೆಯಲ್ಲಿ ಡ್ರ್ಯಾಗನ್​ ಫ್ರೂಟ್ ಬೆಳೆಯುವವರ ಸಂಖ್ಯೆ ಅಧಿಕವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಚಿಕ್ಕ ಫ್ಯಾಕ್ಟರಿ ಹಾಕಿದರೆ ರೈತರಿಗೆ ಇನ್ನt ಹೆಚ್ಚಿನ ಆದಾಯ ಸಿಗಲಿದೆ" ಎಂದರು.

ತೋಟಗಾರಿಕಾ ಇಲಾಖೆಯಿಂದ ಸಹಾಯಧನ:ತೋಟಗಾರಿಕಾ ಬೆಳೆಗಳಾದ ಡ್ರ್ಯಾಗನ್​ ಫ್ರೂಟ್​, ತೆಂಗು, ಪೇರಲ, ಪಪ್ಪಾಯ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ಸಹಾಯಧನ ನೀಡುತ್ತದೆ. ಇಲಾಖೆ ನರೇಗಾ ಯೋಜನೆಯಲ್ಲಿ ಸುಮಾರು 32 ಬೆಳೆಗಳಿಗೆ ಸಹಾಯಧನ ಸಿಗುತ್ತದೆ. ಈ ರೀತಿ ಸಹಾಯಧನ ಪಡೆಯಲು ಇಚ್ಚಿಸುವ ರೈತರು ತಾವು ಬೆಳೆಯುವ ಬೆಳೆಗಳ ಕುರಿತಂತೆ ತಮ್ಮ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಬೇಕು. ಗ್ರಾಮ ಪಂಚಾಯತ್‌ಗೆ ತಾನು ಈ ರೀತಿ ಬೆಳೆ ಬೆಳೆಯುತ್ತೇನೆ ಎಂದು ರೈತ ಮನವಿ ನೀಡಬೇಕು. ಗ್ರಾಮ ಸಭೆ ಈ ಕುರಿತಂತೆ ಚರ್ಚಿಸಿ ತಾಲೂಕು ಪಂಚಾಯತಗೆ ರೈತನ ಮನವಿ ಕಳುಹಿಸುತ್ತದೆ. ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಅನುಮೋದನೆಗೆ ಕಳುಹಿಸುತ್ತದೆ. ನಂತರ ಈ ಕುರಿತಂತೆ ಗ್ರಾಮ ಪಂಚಾಯತಗೆ ಕ್ರಿಯಾಯೋಜನೆ ಬರುತ್ತಿದ್ದಂತೆ ತೋಟಗಾರಿಗೆ ಇಲಾಖೆಗೆ ಕಾಮಗಾರಿ ಹಸ್ತಾಂತರ ಮಾಡುತ್ತಾರೆ.

ರೈತ ತಾನು ಸೃಷ್ಠಿಸಿದ ಮಾನವ ದಿನಗಳ ಮತ್ತು ಬೆಳೆಯ ಸಾಮಗ್ರಿ ಖರ್ಚಿಗೆ ನರೇಗಾ ಯೋಜನೆಯಲ್ಲಿ ಹಣ ನೀಡಲಾಗುತ್ತದೆ. ರುದ್ರಪ್ಪ ಡ್ರ್ಯಾಗನ್​ ಫ್ರೂಟ್ ನೆಡಲು 440 ಗುಂಡಿ ತಗೆಯಲು 276 ಮಾನವ ಶ್ರಮ ದಿನ ಸೃಷ್ಠಿಸಿದ್ದಾರೆ. 256 ಮಾನವಶ್ರಮ ದಿನ ಕೂಲಿಕಾರ್ಮಿಕರ ಕೂಲಿ ರೂಪದಲ್ಲಿ 75 ಸಾವಿರ ರೂಪಾಯಿ ಹಣ ಪಡೆದಿದ್ದಾರೆ. ಸಾಮಗ್ರಿ ವೆಚ್ಚಕ್ಕಾಗಿ ಸಸಿ ಪಡೆಯಲು ಸುಮಾರು 1750 ಗಿಡಗಳಿಗೆ 42 ಸಾವಿರ ರೂಪಾಯಿ ಹಣ ಪಡೆದಿದ್ದಾರೆ.

ತೋಟಗಾರಿಕಾ ಬೆಳೆ ನೋಡಿ ಜೆಪಿಎಸ್ ಆದ ನಂತರ ರೈತ ಫಲಾನುಭವಿಯಾಗಿ ಆಯ್ಕೆಯಾಗುತ್ತಾನೆ ತದನಂತರ ಹಣ ಅವನ ಖಾತೆಗೆ ಜಮೆಯಾಗುತ್ತದೆ. ಈ ರೀತಿ ರುದ್ರಪ್ಪ ಡ್ರ್ಯಾಗನ್​ ಫ್ರೂಟ್ ತೋಟಗಾರಿಕಾ ಬೆಳೆಗೆ ಇಲಾಖೆಯ ಸಹಾಯಧನ ಪಡೆದಿದ್ದಾರೆ. ರೈತನಿಗೆ ಸುಮಾರು ಒಂದು ಎಕರೆ ಡ್ರ್ಯಾಗನ್ ಪ್ರುಟ್ಸ್ ಬೆಳೆಯಲು ಆರು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಸರ್ಕಾರ ನರೇಗಾ ಯೋಜನೆಯಲ್ಲಿ ಸುಮಾರು 1 ಲಕ್ಷ 20 ಸಾವಿರ ಹಣ ರುದ್ರಪ್ಪನ ಖಾತೆಗೆ ಜಮಾ ಮಾಡಿತ್ತು. 2022-23 ನೇ ಸಾಲಿನಲ್ಲಿ ನರೇಗಾ ಯೋಜನೆಯ ಹಣ ರುದ್ರಪ್ಪನ ಖಾತೆಗೆ ಜಮಾ ಆಗಿತ್ತು.

ಇದನ್ನೂ ಓದಿ:ಮುಂಗಾರು ವಾಣಿಜ್ಯ ಬೆಳೆ ಕಡಲೆ ಬೀಜ ದರ ಏರಿಕೆ: ರೈತ ಕಂಗಾಲು

Last Updated : Oct 12, 2023, 10:54 PM IST

ABOUT THE AUTHOR

...view details