ಹಾವೇರಿ:ಭೀಕರ ರಸ್ತೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ನಡೆದಿದೆ.
ಟಿಪ್ಪರ್ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ದಂಪತಿ ಮತ್ತು ಅವರಿಬ್ಬರು ಮಕ್ಕಳು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರತೆಗೆ ಬೈಕ್ ಸವಾರರ ದೇಹಗಳು ಛಿದ್ರ ಛಿದ್ರವಾಗಿ ಬಿದ್ದಿದ್ದವು.
ಮೃತರನ್ನ ಮುದೇನೂರು ಗ್ರಾಮದ 40 ವರ್ಷದ ಸಿದ್ದಪ್ಪ ನಾಗೇನಹಳ್ಳಿ ಅವರ ಪತ್ನಿ 32 ವರ್ಷದ ಅನಸೂಯಮ್ಮ ಮತ್ತು ಅವರ ಮಕ್ಕಳಾದ 11 ವರ್ಷದ ಅನಿತಾ ಮತ್ತು 9 ವರ್ಷದ ಸುನೀತಾ ಎಂದು ಗುರುತಿಸಲಾಗಿದೆ.
ಈ ಕುಟುಂಬ ಗುಡ್ಡದಹೊಸಳ್ಳಿ ಗ್ರಾಮದೇವಿ ಜಾತ್ರೆಗೆ ತೆರಳಿತ್ತು. ನಿನ್ನೆ ಮಧ್ಯಾಹ್ನ ಮುದೇನೂರು ಗ್ರಾಮಕ್ಕೆ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮುದೇನೂರಿನ ತುಂಗಭದ್ರಾ ನದಿಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ನಾಲ್ವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಶವಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಟಿಪ್ಪರ್‌ಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು, ಅವುಗಳ ಓಡಾಟದ ಮೇಲೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಹಾವೇರಿ ಎಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಎಸ್ಪಿ ಕೆ.ಜಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರು ಟಿಪ್ಪರ್ ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು. ಈ ಕುರಿತಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲಾ ಎಂದು ಆರೋಪಿಸಿದರು.
ದಂಪತಿ ಮತ್ತು ಮಕ್ಕಳ ಸಾವಿಗೆ ಸ್ಥಳೀಯರು ಮಮ್ಮಲ ಮರುಗಿದರು. ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿತ್ತು. ಜಿಲ್ಲಾಧಿಕಾರಿಗಳು ಬರುವಂತೆ ಪ್ರತಿಭಟನಾಕಾರರು ಪಟ್ಟುಹಿಡಿದರು. ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ್ ಸ್ಥಳಕ್ಕೆ ಆಗಮಿಸಿ ಮರಳು ದಂದೆಕೋರರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಸ್ ಪಡೆದರು.