ಹಾವೇರಿ: ಇಂದಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಮುಂದುವರಿದಂತೆ ಪಕ್ಷಿಗಳ ಸಂಕುಲ ಅಳಿವಿನಂಚಿನಲ್ಲಿದೆ. ಪಕ್ಷಿಗಳಿಲ್ಲದ ಪ್ರಪಂಚವನ್ನು ಉಹಿಸಿಕೊಳ್ಳುವುದು ಅಸಾಧ್ಯ. ಪರಾಗಸ್ಪರ್ಶ, ಬೀಜಪ್ರಸರಣ, ಪೀಡೆಕೀಟ ನಿಯಂತ್ರಣದಂತಹ ಹತ್ತಾರು ಬಗೆಯ ನೈಸರ್ಗಿಕ ಸೇವೆ ಒದಗಿಸುವ ಪಕ್ಷಿಗಳು ಪರೋಪಕಾರಿ ಜೀವಿಗಳು. ಇಂತಹ ಪಕ್ಷಿ ಸಂಕುಲ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವೂ ಹೌದು.
ಆದರೆ, ಇಲ್ಲೊಬ್ಬರು ಪಕ್ಷಿಪ್ರೇಮಿ ಕಳೆದ 14 ವರ್ಷಗಳಿಂದ ಪಕ್ಷಿಗಳಿಗೆ ಆಹಾರ ನೀಡುತ್ತ ಅವುಗಳ ಸಂರಕ್ಷಣೆಗೆ ನಿಂತು ಮಾದರಿಯಾಗಿದ್ದಾರೆ. ಏಲಕ್ಕಿ ನಗರಿ ಖ್ಯಾತಿಯ ಹಾವೇರಿ ನಗರದ ನಿವಾಸಿ ತಿಕ್ಮಾರಾಮ ಚೌಧರಿ ಸಾವಿರಾರೂ ಪಕ್ಷಿಗಳಿಗೆ ನಿತ್ಯ ಆಹಾರ ನೀರು ಒದಗಿಸುತ್ತಿರುವರಾಗಿದ್ದಾರೆ. ರಾಜಸ್ಥಾನದಿಂದ ಆಗಮಿಸಿ ಹಾವೇರಿ ನಗರದಲ್ಲಿ ಬೇಕರಿ ಉದ್ದಿಮೆ ನಡೆಸುತ್ತಿರುವ ತಿಕ್ಮಾರಾಮ ಚೌಧರಿ ಅವರು ದಿನನಿತ್ಯ ಪಕ್ಷಿಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಆರಂಭದಲ್ಲಿ ಬೊಗಸೆಯಲ್ಲಿ ಆಹಾರ ಹಾಕುತ್ತಿದ್ದ ತಿಕ್ಮಾರಾಮ, ಈಗ ದಿನಕ್ಕೆ ಐದರಿಂದ ಏಳು ಕೆ ಜಿ ಆಹಾರ ಪಕ್ಷಿಗಳಿಗೆ ಮೀಸಲಿಟ್ಟಿದ್ದಾರೆ.
ಬೆಳಗಿನಿಂದ ಸಂಜೆಯವರೆಗೆ ಪಕ್ಷಿಗಳಿಗೆ ಆಹಾರ ನೀರು : ಬೇಕರಿ ಮುಂದೆ ಇರುವ ಮನೆಯ ಚಿಕ್ಕ ಕೊಠಡಿ ಮೇಲಿನ ಹಂಚಿನ ಮೇಲೆ ಆಹಾರ ಹಾಕುವರು. ಆಹಾರ ಹಾಕುತ್ತಿದ್ದಂತೆ ಆಕಾಶದಲ್ಲಿ ಹಾರುವ ಹಕ್ಕಿಗಳು ಹಿಂಡು ಹಿಂಡಾಗಿ ಸುತ್ತಮುತ್ತ ಒಂದು ಸುತ್ತು ಗಿರಕಿಹೊಡೆದು ಆಹಾರ ತಿನ್ನಲು ಹಂಚಿನ ಮನೆ ಮೇಲೆ ಬರುತ್ತವೆ. ಅಲ್ಲಿನ ಸಮೀಪದ ಮರಗಳ ಟೊಂಗೆಗಳ ಮೇಲೆ ಮನೆಗಳ ಮಾಳಿಗೆಗಳ ಮೇಲೆ ಬೇಕರಿ ಮುಂದಿರುವ ವಿದ್ಯುತ್ ತಂತಿಗಳ ಮೇಲೆ ಸಾಲು ಸಾಲಾಗಿ ಕುಳಿತುಕೊಳ್ಳುವ ಪಕ್ಷಿಗಳು ನಂತರ ಹಂಚಿನ ಮೇಲೆ ಹಾಕಿರುವ ಆಹಾರ ತಿನ್ನುತ್ತವೆ.
ಇದು ಮುಂಜಾನೆ 6 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಆಹಾರ ದಾಸೋಹ ಮುಂದುವರಿಯುತ್ತೆ. ಪಕ್ಷಿಗಳು ಆಹಾರ ಖಾಲಿ ಮಾಡಿದಂತೆ ತಿಕ್ಮಾರಾಮ್ ಆಹಾರ ಹಾಕುತ್ತಲೇ ಇರುತ್ತಾರೆ. ಅಲ್ಲದೇ ಪಕ್ಷಿಗಳಿಗೆ ನೀರಿನ ದಾಹ ತೀರಿಸಲು ನೀರಿನ ವ್ಯವಸ್ಥೆ ಸಹ ಹಂಚಿನ ಮೇಲೆ ವ್ಯವಸ್ಥೆ ಮಾಡಿದ್ದಾರೆ. ಮುಂಜಾನೆ ಹಕ್ಕಿಗಳ ಹಿಂಡುಗಳು ಆಗಮಿಸಿ ಆಹಾರ ತಿನ್ನುತ್ತವೆ. ಮೊದ ಮೊದಲು ಆಹಾರ ಇರುವ ಮನೆ ಸುತ್ತ ಸುತ್ತು ಹಾಕುವ ಪಕ್ಷಿಗಳು ಆಹಾರ ಇರುವುದು ಖಚಿತ ಆಗುತ್ತಿದ್ದಂತೆ ಹಂಚಿನ ಮೇಲೆ ಇಳಿದು ಆಹಾರ ತಿನ್ನುತ್ತವೆ.
ಆಹಾರ ಅರಸಿ ಬರುವ ವಿವಿಧ ಪಕ್ಷಿಗಳು: ಗುಬ್ಬಿ, ಪಾರಿವಾಳ, ಚಿಟಗುಪ್ಪಿ,ಕಾಗೆ, ಗೊರವಂಕ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಆಹಾರ ಅರಸಿ ಬರುತ್ತವೆ. ಗಂಟೆಗೊಮ್ಮೆ ಬೇಕರಿ ಮುಂದಿನ ಆವರಣಕ್ಕೆ ಬರುವ ತಿಕ್ಮಾರಾಮ್ ಅವರು ಪಕ್ಷಿಗಳ ಮುಂದೆ ಆಹಾರ ಇದೆಯೋ, ಇಲ್ಲವೋ ಖಚಿತಪಡಿಸಿಕೊಳ್ಳುತ್ತಾರೆ. ಖಾಲಿಯಾಗಿದ್ದರೆ ಮತ್ತೆ ಆಹಾರ ಹಾಕಿ ತಮ್ಮ ಕಾರ್ಯದಲ್ಲಿ ನಿರತರಾಗುತ್ತಾರೆ.