ಹಾವೇರಿ: 'ಕನ್ನಡ ನಾಡು, ನುಡಿ, ಜಲ, ಸ್ವಾತಂತ್ರ್ಯಕ್ಕೆ ಪ್ರಾಣತ್ಯಾಗ ಮಾಡಿದ ವೀರರ ನೆಲ ಹಾವೇರಿ. ಈ ಪುಣ್ಯಭೂಮಿ ಕನ್ನಡ ಭುವನೇಶ್ವರಿ ತಾಯಿಯ ಒಡಲು. ಬಹಳ ದೊಡ್ಡ ಹೃದಯ ಶ್ರೀಮಂತಿಕೆ ಈ ಮಣ್ಣಿನ ಗುಣದಲ್ಲಿದೆ. ಯಾವುದಕ್ಕೂ ಕೊರತೆ ಇಲ್ಲ. ಕನ್ನಡದ ಜ್ಞಾನ, ಸಾಹಿತ್ಯ, ಸಂಸ್ಕೃತಿ, ಬದುಕು, ತಂತ್ರಜ್ಞಾನ ಎಲ್ಲವೂ ಶ್ರೀಮಂತವಾಗಿದೆ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಹಾವೇರಿಯಲ್ಲಿ ನಡೆದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಪುಣ್ಯಭೂಮಿಯಿಂದ ಭುವನೇಶ್ವರಿ ಒಡಲಿಗೆ ನಮಸ್ಕರಿಸುವೆ. ಕನ್ನಡದ ಹಬ್ಬ ಅತ್ಯಂತ ಯಶಸ್ವಿಯಾಗಿದೆ. ಇದಕ್ಕಾಗಿ ದುಡಿದ ಎಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು. ಮೂರು ದಿನಗಳ ಕಾಲ ಸಮ್ಮೇಳನದಲ್ಲಿ ಪಾಲ್ಗೊಂಡು 32ಕ್ಕೂ ಅಧಿಕ ಗೋಷ್ಠಿಗಳ ನೇತೃತ್ವ ವಹಿಸಿದ್ದ ಸಾಹಿತಿ ದೊಡ್ಡರಂಗೇಗೌಡರಿಗೆ ಮತ್ತು ಕ್ರಿಯಾಶೀಲತೆ ಪ್ರದರ್ಶಿಸಿದ ಕಸಾಪ ರಾಜ್ಯಧ್ಯಕ್ಷರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.
ಕನ್ನಡ ಹೋರಾಟಗಾರರ ಕೇಸ್ ವಾಪಸ್: 'ಕನ್ನಡಿಗರೆಲ್ಲಾ ಸೇರಿ ಕನ್ನಡಕ್ಕಾಗಿ ಕೈ ಎತ್ತಿದಾಗ ಕನ್ನಡ ಶಕ್ತಿಶಾಲಿಯಾಗುತ್ತದೆ. ಬೇರೆ ರಾಜ್ಯಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳಿಗಿಂತ ಬಹಳ ಭಿನ್ನವಾಗಿ ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತವೆ. ಗಡಿ ನಾಡಿನ ಶಿಕ್ಷಣ, ಆರೋಗ್ಯ ಮತ್ತು ಸೌಕರ್ಯಗಳ ಅಭಿವೃದ್ಧಿಗೆ 100 ಕೋಟಿ ರೂ.ಒದಗಿಸಲಾಗುವುದು. ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರ ಮೇಲಿರುವ ಕಾಗ್ನಿಜಬಲ್ ಹೊರತುಪಡಿಸಿದ ಉಳಿದ ಎಲ್ಲಾ ಪ್ರಕರಣಗಳನ್ನು ಹಿಂದೆ ಪಡೆಯಲು ಸರ್ಕಾರ ಬದ್ಧವಾಗಿದೆ. 2008 ರಿಂದ ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ 13.30 ಕೋಟಿ ರೂ. ನೆರವು ದೊರೆತಿದೆ' ಎಂದರು.
'ಕಾನೂನು ತೊಡಕು ನಿವಾರಿಸಿಕೊಂಡು ಮಹದಾಯಿ, ಕಳಸಾ ಬಂಡೂರಿ ಯೋಜನೆಯಾಗಿ ಅನುಷ್ಠಾನವಾಗಲಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ಗೆ ಹೆಚ್ಚಿಸಲು ಶೀಘ್ರ ನ್ಯಾಯಮಂಡಳಿಯ ಅನುಮೋದನೆ ಸಿಗುವ ಭರವಸೆ ಇದೆ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಮೇಕೆದಾಟು ಯೋಜನೆ ಕೂಡ ಜಾರಿಯಾಗಲಿದೆ. ಎಲ್ಲಾ ಮಾತೃ ಭಾಷೆಗಳಿಗೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ' ಎಂದು ಹೇಳಿದರು.
'ಮುಂಬರುವ ದಿನಗಳಲ್ಲಿ ಸಂವಿಧಾನ ರಕ್ಷಣೆ ಪಡೆಯಲು ಶ್ರಮಿಸಲಾಗುವುದು. ಕರ್ನಾಟಕಕ್ಕೆ ಹೊರ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಜನ ಬರುತ್ತಿದ್ದಾರೆ. ಆದರೆ, ಕನ್ನಡ ಕಲಿಯುತ್ತಿಲ್ಲ. ಈ ನಾಡಿನಲ್ಲಿ ನೆಲೆಸಲು ಇಚ್ಛಿಸುವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ. ಕನ್ನಡಕ್ಕಾಗಿ ಗಡಿಯಾಚೆ ಹೋರಾಡಿದ ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು' ಎಂದು ಮುಖ್ಯಮಂತ್ರಿಗಳು ಹೇಳಿದರು.