ಹಾವೇರಿ:ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಆರು ವರ್ಷದ ಬಾಲಕ ಮಹಮ್ಮದ ಜೈದ್ ಈಗಾಗಲೇ ರಾಜ್ಯ, ಅಂತಾರಾಜ್ಯ ಮಟ್ಟದ 10 ಮ್ಯಾರಥಾನ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾನೆ. ಭಾಗವಹಿಸಿದ 10 ಮ್ಯಾರಥಾನ್ ಸ್ಪರ್ಧೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈತ ಇದೇ 28 ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಾಗಿದ್ದಾನೆ.
ಮೂರೂವರೆ ವರ್ಷದಿಂದ ಐದು ಕಿಮೀ ಓಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಈ ಬಾಲಕ ಹಿಂತಿರುಗಿ ನೋಡಿಲ್ಲ. ಅಲ್ಲಿಂದ ಆರಂಭವಾದ ಇವನ ಪಯಣ ಇಂದಿಗೂ ಮುಂದುವರಿಯುತ್ತಿದೆ. ಸೌಥ್ ಏಶಿಯನ್ ಫೆಡರೇಷನ್ ಆಯೋಜಿಸಿರುವ ಅಂತಾರಾಷ್ಟ್ರೀಯ ಮ್ಯಾರಥಾನ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ತಾಲೀಮು ನಡೆಸುತ್ತಿದ್ದಾನೆ.
ನಿತ್ಯ ಮುಂಜಾನೆ ಮತ್ತು ಸಂಜೆ ವ್ಯಾಯಾಮ ಮಾಡುವ ಮಹಮ್ಮದ್ 10 ಕಿಮೀ ಓಡುತ್ತಾನೆ. ಇತನ ಸಾಧನೆ ಹಿಂದೆ ನಿಂತವರು ತಂದೆ ಆಸೀಫ್ ಅಲಿ. ಆಸೀಫ್ ಅಲಿ 18 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆಯ ನಂತರ ಸಾಧನೆ ಮಾಡುವ ಉತ್ಸಾಹದಲ್ಲಿದ್ದ ಆಸೀಫ್ ಅಲಿಗೆ ದೈಹಿಕ ನ್ಯೂನತೆ ಕಾಡಿದ್ದರಿಂದ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದ ವಿಚಲಿತರಾಗದ ಆಸೀಫ್ ಅವರು ತಮ್ಮ ಮಗ ಮಹಮ್ಮದ್ನನ್ನು ಮ್ಯಾರಥಾನ್ಗೆಂದೇ ವಿಶೇಷವಾಗಿ ತರಬೇತಿ ನೀಡಿ ತಯಾರು ಮಾಡುತ್ತಿದ್ದಾರೆ.