ರಾಣೆಬೆನ್ನೂರು: ನಗರದಲ್ಲಿ ಕೊರೊನಾ ಆರ್ಭಟ ಶುರುವಾಗಿದ್ದು, ರಾಣೆಬೆನ್ನೂರು ತಾಲೂಕಿನಲ್ಲಿ ಒಂದೇ ದಿನ 36 ಕೊರೊನಾ ಪ್ರಕರಣ ಪತ್ತೆಯಾಗಿವೆ.
ಹೌದು.. ರಾಣೆಬೆನ್ನೂರಿನ ಮಾರುತಿ ನಗರ ಸದ್ಯ ಕೊರೊನಾ ಸ್ಟಾಟ್ ಆಗಿ ಹೊರಹೊಮ್ಮುತ್ತಿದೆ. ಜೂ.29 ರಂದು ಕೊರೊನಾ ಸೋಂಕಿತ ವ್ಯಕ್ತಿ ತನ್ನ ಮಗನ ಮದುವೆ ಮಾಡುವ ಮೂಲಕ ಇಡೀ ಕುಟುಂಬಕ್ಕೆ ಸೋಂಕು ಹಬ್ಬಿಸಿ ಸಾವನ್ನಪ್ಪಿದ್ದಾರೆ. ಆದರೆ ಈಗ ಅವರ ಪ್ರಾಥಮಿಕ ಸಂಪರ್ಕ ಹೊಂದಿರುವ ಕುಟುಂಬದ 34 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಮಾರುತಿ ನಗರದ ಜನ ಈ ಪ್ರಕರಣದಿಂದ ಬೆಚ್ಚಿ ಬಿದ್ದಿದ್ದಾರೆ.
ಇಷ್ಟೊಂದು ಪ್ರಕರಣಕ್ಕೆ ಕಾರಣವೇನು?:
ಮಾರುತಿ ನಗರದ 55 ವರ್ಷದ ವ್ಯಕ್ತಿಯೊಬ್ಬರು ತನ್ನ ಮಗನ ಮದುವೆಯನ್ನು ಜೂ.29 ರಂದು ನಗರದ ಮೌನೇಶ್ವರ ಕಲ್ಯಾಣ ಮಂಟರದಲ್ಲಿ ಮಾಡಿದ್ದರು. ಅಂದು ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ದಾವಣಗೆರೆ ಮತ್ತು ರಾಣೆಬೆನ್ನೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ನಂತರ ಆತನ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಜು.7 ರಂದು ಚಿಕಿತ್ಸೆ ಫಲಕಾರಿಯಾಗದೆ ಮದುಮಗನ ತಂದೆ ದಾವಣಗೆರೆಯಲ್ಲಿ ಸಾವನ್ನಪ್ಪಿದ್ದರು.
ಸದ್ಯ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ 38 ಜನರನ್ನು ಸರ್ಕಾರಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 34 ಜನರಿಗೆ ಸೋಂಕು ದೃಢಪಟ್ಟಿದೆ.