ಹಾವೇರಿ: ನಗರದಲ್ಲಿ ಮೂರು ದಿನಗಳ ಕಾಲ ನಡೆದಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 25 ಕೋಟಿ ರೂ. ವೆಚ್ಚವಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದರು. ಈ ಬಗ್ಗೆ ಹಾವೇರಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಿಡುಗಡೆ ಮಾಡಿದ ಅನುದಾನಕ್ಕಿಂತ 4 ಕೋಟಿ 98 ಲಕ್ಷ ರೂಪಾಯಿ ಹೆಚ್ಚು ಖರ್ಚಾಗಿದೆ ಎಂದರು.
ಮೂರು ದಿನಗಳ ಕಾಲ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಚ್ಚುಕಟ್ಟು ಮತ್ತು ಒಕ್ಕಟ್ಟಿನ ಸಾಹಿತ್ಯ ಸಮ್ಮೇಳನವನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಸಡಗರದಿಂದ ಆಚರಿಸಲಾಯಿತು. ಈ ಹಿಂದೆ ನಡೆದ ಸಾಹಿತ್ಯ ಸಮ್ಮೇಳನಗಳಿಗೆ ವ್ಯತಿರಿಕ್ತವಾಗಿ ಅಚ್ಚುಕಟ್ಟಾದ ಮತ್ತು ಊಟದ ವ್ಯವಸ್ಥೆಯೂ ಸೇರಿದಂತೆ ಇತರೆ ಎಲ್ಲ ವ್ಯವಸ್ಥೆಗಳಿಂದ ಸಮ್ಮೇಳನ ಅದ್ದೂರಿಯಾಗಿ ನಡೆದಿದೆ ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನಕ್ಕಾದ ಖರ್ಚುಗಳ ವಿವರ ನೀಡಿದ ಅವರು, ನಮ್ಮ ಲೆಕ್ಕಾಚಾರ ತಪ್ಪಲು ಪ್ರಮುಖ ಕಾರಣ ಊಟದ ಖರ್ಚು. ಊಟಕ್ಕೆ 5 ಕೋಟಿ ರೂ. ಎಂದು ಅಂದಾಜು ಮಾಡಿದ್ದೆವು. ಆದರೆ 8 ಕೋಟಿ 10 ಲಕ್ಷ 80 ಸಾವಿರ ರೂ ಖರ್ಚಾಗಿದೆ. ಕನ್ನಡ ಸಾಹಿತ್ಯ ಪರಿಷತ್ಗೆ 1 ಕೋಟಿ 90 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜು ಮಾಡಿದ್ದೆವು. ಆದರೆ ಪರಿಷತ್ಗೆ ಎರಡು ಕೋಟಿ 63 ಲಕ್ಷ ರೂ. ಖರ್ಚಾಗಿದೆ. ಅದಾಯದಲ್ಲಿ ಮಳಿಗೆಗಳಿಂದ 1 ಕೋಟಿ ರೂ. ಬರುವುದಾಗಿ ನಿರೀಕ್ಷೆ ಮಾಡಿದ್ದೆವು. ಆದರೆ ಅಷ್ಟು ಬಂದಿಲ್ಲ. ಪ್ರತಿನಿಧಿ ಶುಲ್ಕ 20 ಸಾವಿರ ಜನರಿಂದ ಬರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ 10 ಸಾವಿರ ಜನರದ್ದು ಮಾತ್ರ ಬಂದಿದೆ ಎಂದು ಮಾಹಿತಿ ನೀಡಿದರು.