ಅಧಿಕಾರಿಯಿಂದ ಬ್ಯಾಂಕ್‌ಗೆ 2 ಕೋಟಿಗೂ ಅಧಿಕ ವಂಚನೆ ಹಾವೇರಿ: ಬ್ಯಾಂಕ್ ಸಹಾಯಕ ವ್ಯವಸ್ಥಾಪಕನೊಬ್ಬ ಬ್ಯಾಂಕ್‌ಗೆ ವಂಚಿಸಿರುವ ಘಟನೆ ಜಿಲ್ಲೆಯ ವಿದ್ಯಾನಗರದಲ್ಲಿ ನಡೆದಿದೆ. ಹಾವೇರಿಯ ಐಸಿಐಸಿಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೀರೇಶ್ ಕಾಶಿಮಠ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ವೀರೇಶ್ ಕಾಶಿಮಠ ಅವರು ಕಳೆದ 2022 ಆಗಸ್ಟ್ 22 ರಿಂದ ಫೆಬ್ರವರಿ 7 ರವರೆಗೆ ಗ್ರಾಹಕರು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದ ಹಣವನ್ನು ತನಗೆ ಬೇಕಾದವರ ಖಾತೆಗೆ ಜಮಾ ಮಾಡಿದ್ದಾರೆ. ಕಳೆದ ಆರು ತಿಂಗಳಲ್ಲಿ ವೀರೇಶ್ ಅವರು ಸುಮಾರು 2 ಕೋಟಿ 36 ಲಕ್ಷ ರೂಪಾಯಿ ಹಣವನ್ನು ತನಗೆ ಬೇಕಾದವರ ಖಾತೆಗೆ ಜಮೆ ಮಾಡಿದ್ದಾರೆ. ಬಳಿಕ ಈ ಹಣವನ್ನು ಪಡೆದುಕೊಂಡು ವೀರೇಶ್ ಆನ್ಲೈನ್ ಗೇಮ್ ಆಡುತ್ತಿದ್ದರು ಎಂದು ಎಸ್ ಪಿ ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಹಾವೇರಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಶಹರ ಠಾಣೆಗೆ ದೂರು ನೀಡಿದ್ದು, ಆರೋಪಿ ವೀರೇಶ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಎರಡು ಕೋಟಿಗೂ ಅಧಿಕ ಹಣ ದುರುಪಯೋಗ ಪಡಿಸಿಕೊಂಡಿರುವುದರಿಂದ ಪ್ರಕರಣವನ್ನು ಆದಷ್ಟು ಬೇಗ ಸಿಐಡಿಗೆ ವರ್ಗಾಯಿಸಲಾಗುವುದು ಎಂದು ಎಸ್ಪಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಇದುವರೆಗೆ ಶಹರ ಠಾಣೆಯ ತನಿಖಾಧಿಕಾರಿ ಈ ಪ್ರಕರಣವನ್ನು ತನಿಖೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಲಿದೆ. ಪ್ರಕರಣದಲ್ಲಿ ಶಹರ ಠಾಣೆಯ ತನಿಖಾಧಿಕಾರಿ ಆರೋಪಿಯು ಬಳಕೆ ಮಾಡಲು ಉದ್ದೇಶಿದ್ದ 32 ಲಕ್ಷ ರೂಪಾಯಿಯನ್ನು ತಡೆ ಹಿಡಿದಿದ್ದಾರೆ ಎಂದು ಎಸ್ಪಿ ಶಿವಕುಮಾರ್ ಇದೇ ವೇಳೆ ತಿಳಿಸಿದರು.
ಬೆಂಗಳೂರಿನಲ್ಲಿ ಸಹಕಾರಿ ಬ್ಯಾಂಕ್ ಅವ್ಯವಹಾರ: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಾಗಿತ್ತು. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ರಾಜೇಶ್ ವಿಆರ್ ಎಂಬವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಸಹಕಾರಿ ಬ್ಯಾಂಕ್ ಮೇಲೆ ಒಂದು ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಸಾರ್ವಜನಿಕ ಠೇವಣಿ ದುರ್ಬಳಕೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ :ಹೆಚ್ಚಿನಬಡ್ಡಿ ಆಮಿಷ ತೋರಿಸಿ ಜನರಿಂದ ಹಣ ಠೇವಣಿ ಪಡೆದುಕೊಂಡು ವಂಚಿಸಿದ ಆರೋಪ ಈ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮೇಲಿದೆ. ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಇಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ್ದರು. ಈ ಸಂಬಂಧ 45.32 ಕೋಟಿ ರೂ ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಬಗ್ಗೆ ಬೆಂಗಳೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :ಡ್ರಗ್ಸ್ ಪ್ರಕರಣ: ಮಣಿಪಾಲ ವಿವಿಯ 42 ವಿದ್ಯಾರ್ಥಿಗಳು ಅಮಾನತು