ಹಾವೇರಿ:ಇಂದಿಗೆ ಹಾವೇರಿಯಲ್ಲಿ ಗೋಲಿಬಾರ್ ನಡೆದು 16 ವರ್ಷ ಕಳೆದಿವೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ನಗರದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ ರೈತರು ಭಾಗವಹಿಸುವ ಮೂಲಕ ಬಸ್ ನಿಲ್ದಾಣದ ಬಳಿ ಇರುವ ಹುತಾತ್ಮ ರೈತ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಈ ವೇಳೆ ವಿವಿಧ ರೈತ ಮುಖಂಡರು ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವಾರ್ಪಣೆ ಸಲ್ಲಿಸಿದರು.
10 ಜೂನ್ 2008 ರ ಗೋಲಿಬಾರ್‌ನಲ್ಲಿ ಹುತಾತ್ಮರಾಗಿದ್ದ ರೈತ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಅಮರ್ ರಹೇ ಅಮರ್ ರಹೇ ಎಂದು ಘೋಷಣೆ ಕೂಗಿದರು. ವಿವಿಧ ರೈತ ಸಂಘದ ಪದಾಧಿಕಾರಿಗಳು ಹುತಾತ್ಮರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಿದರು.
ಹುತಾತ್ಮ ರೈತರಿಗೆ ಜಯಘೋಷ ಹಾಕಿದ ವಿವಿಧ ಸಂಘಟನೆಯ ರೈತರು ಹಸಿರು ಟವೆಲ್ ಬೀಸಿ ಜಯಕಾರ ಹಾಕಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ್ ಮಾತನಾಡಿ, ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜವಾನರು ದೇಶ ಕಾಯದೆ ಇದ್ದರೇ, ಕಿಸಾನ್ ಒಕ್ಕಲುತನ ಮಾಡದಿದ್ದರೇ ದೇಶ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ. ರೈತ ಬೆಳೆ ಬೆಳೆಯದಿದ್ದರೆ ಊಹಿಸಲಾಗದಷ್ಟು ದೇಶದಲ್ಲಿ ಗಂಡಾಂತರ ಸಮಸ್ಯೆಗಳು ಉದ್ಬವಿಸುತ್ತವೆ ಎಂದರು.
ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಹಿಂದಿನ ಸರ್ಕಾರ ದುರಂಹಕಾರ ಮತ್ತು ದುರಾಡಳಿತದಿಂದ ಎಲ್ಲ ರೈತ ಸಂಘಟನೆಯ ಚಳವಳಿಗಾರರನ್ನು ಎದುರು ಹಾಕಿಕೊಂಡಿತು ಎಂದು ಆರೋಪಿಸಿದರು. ರೈತರ ಪರವಾಗಿ ಹೋರಾಟ ಮಾಡಿದಾಗ ನಮ್ಮ ಜಿಲ್ಲೆಯ ಸಿಎಂ ಬಸವರಾಜ ಬೊಮ್ಮಾಯಿ ರೈತರ ಅಳಲು ಕೇಳಿಸಿಕೊಳ್ಳಲಿಲ್ಲಾ. ರೈತ ವಿರೋಧಿ ಮೂರು ಕಾಯ್ದೆಗಳನ್ನು ವಾಪಸ್ ತಗೆದುಕೊಳ್ಳಲಿಲ್ಲ. ಹೀಗಾಗಿ ರಾಜ್ಯದ ರೈತ ಸಮುದಾಯ ಬಿಜೆಪಿ ಸರ್ಕಾರವನ್ನು ಮನೆಗೆ ಕಳಿಸಿದೆ ಎಂದು ಹೇಳಿದರು.