ಹಾಸನ : ಯುವತಿ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಹಲ್ಲೆಗೊಳಗಾಗಿದ್ದ ಯುವಕನೋರ್ವ ತಿಂಗಳ ಬಳಿಕ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾನೆ.
ಅಶ್ವಥ್ (28) ಅನುಮಾನಸ್ಪದವಾಗಿ ಕೊನೆಯುಸಿರೆಳೆದಿರೋ ಯುವಕನಾಗಿದ್ದು, ಕಳೆದ ತಿಂಗಳ ಏ.28ರಂದು ಯುವತಿಯ ಕಡೆಯುವರು ಹಲ್ಲೆ ನಡೆಸಿದ್ದರಿಂದ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಆತ ಕೊನೆಯುಸಿರೆಳೆದಿದ್ದಾನೆ ಎಂಬುದು ಪೋಷಕರು ನೀಡಿದ ದೂರಿನಲ್ಲಿ ತಿಳಿದು ಬಂದಿದೆ.
ಹಾಸನ ತಾಲೂಕಿನ ಎಸ್. ಬಂಡೀಹಳ್ಳಿಯಲ್ಲಿ ಯುವತಿ ವಿಚಾರಕ್ಕೆ ಸಂಬಂಧಪಟ್ಟಂತೆ ಏ. 28 ರಂದು ನಡೆದ ಗಲಾಟೆಯಲ್ಲಿ ಹಾಸನ ತಾಲೂಕಿನ ಗಾಡೇನಹಳ್ಳಿ ಗ್ರಾಮದ ಅಶ್ವತ್ಥ್ ಗಂಭೀರವಾಗಿ ಗಾಯಗೊಂಡಿದ್ದ.
ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಈ ಗಲಾಟೆ ನಡೆದಿದ್ದು, ಯುವತಿಯೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಇಟ್ಟುಕೊಳ್ಳಬಾರದೆಂದು ಹಲವು ಬಾರಿ ಬಂಡೀಹಳ್ಳಿ ಗ್ರಾಮಸ್ಥರು ಅಶ್ವತ್ಥ್ ಪೋಷಕರನ್ನ ಕರೆದು, ನಿಮ್ಮ ಮಗನಿಗೆ ಬುದ್ದಿ ಹೇಳಿ ಅಂತ ತಿಳಿಸಿದ್ದರು ಎನ್ನಲಾಗಿದೆ.
ಆದರೆ, ಅಶ್ವತ್ಥ್ ಮಾತ್ರ ಸುಮ್ಮನಾಗದೇ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದ. ಗಲಾಟೆಯ ಬಳಿಕ ಪಾನಮತ್ತನಾಗಿ ಬಂಡಿಹಳ್ಳಿ ಗ್ರಾಮಕ್ಕೆ ಗಲಾಟೆ ಮಾಡಿದ ಹಿನ್ನೆಲೆ ಗ್ರಾಮಸ್ಥರು ಅಶ್ವತ್ಥ್ಗೆ ಥಳಿಸಿದ್ದರು.
ನಂತರ ರಾಜಿ ಪಂಚಾಯ್ತಿ ಮೂಲಕ ಸಮಸ್ಯೆ ಬಗೆಹರಿದಿತ್ತು. ಆದ್ರೆ, ಕಳೆದ ಮೂರು ದಿನಗಳ ಹಿಂದೆ ಅಶ್ವತ್ಥ್ ಇದಕ್ಕಿದ್ದಂತೆ ತಲೆಸುತ್ತಿ ಬಿದ್ದಿದ್ದಾನೆ. ಕೂಡಲೇ ಪೋಷಕರು ಹಾಸನದ ಖಾಸಗಿ ಆಸ್ಪತ್ರೆಗೆ ಆತನನ್ನು ದಾಖಲಿಸಿದ್ದರು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.