ಹಾಸನ:ನಿಶ್ಚಿತಾರ್ಥ ಮುಗಿಸಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುವ ಹೊತ್ತಲ್ಲಿ, ಯುವಕ ಮದುವೆಯಾಗಲು ನಿರಾಕರಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಇಂಟಿತೊಳಲು ಗ್ರಾಮದಲ್ಲಿ ನಡೆದಿದೆ. ಯುವತಿ ಹಾಗು ಆಕೆಯ ಪೋಷಕರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ, ಇಂಟಿತೊಳಲು ಗ್ರಾಮದ ಯುವರಾಜ್ ಎಂಬವರ ಮಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ್ನಾಪುರ ಚನ್ನಿಗ ಗ್ರಾಮದ ನಿಶ್ಚಿನ್ ಎಂಬಾತನೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು.
ಮದುವೆ ನಿಶ್ಚಯವಾಗುವ ಮುನ್ನವೇ ಹುಡುಗಿಯನ್ನು ಪರಿಚಯ ಮಾಡಿಕೊಂಡಿದ್ದ ನಿಶ್ಚಿನ್ ಗೋವಾಕ್ಕೆ ಟ್ರಿಪ್ ಕರೆದುಕೊಂಡು ಹೋಗಿದ್ದ. ಅಲ್ಲಿ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಒತ್ತಾಯಿಸಿದ್ದಾನಂತೆ. ಮದುವೆಗೂ ಮುನ್ನ ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.
ಇದಾದ, ಬಳಿಕ ಮತ್ತೊಂದು ವರಸೆ ತೆಗೆದ ನಿಶ್ಚಿನ್, ಕಲ್ಯಾಣ ಮಂಟಪದಲ್ಲೇ ನಿಶ್ಚಿತಾರ್ಥ ಮಾಡಿಕೊಡುವಂತೆ ಮತ್ತು ತಾನು ಹೇಳಿದ ರೀತಿಯದ್ದೇ ಭೋಜನ ವ್ಯವಸ್ಥೆ ಮಾಡುವಂತೆ ಬೇಡಿಕೆ ಇಟ್ಟಿದ್ದನಂತೆ. ಆತನ ಬೇಡಿಕೆಯಂತೆ ಹುಡುಗಿ ಮನೆಯವರು ಬೇಲೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಸಿದ್ದಾರೆ. ಇದೀಗ, ಮದುವೆ ಸಮೀಪಿಸುತ್ತಿದ್ದಂತೆ ನಿಶ್ಚಿನ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇದನ್ನೂಓದಿ: ಪ್ರೀತಿಸಿ ಮದುವೆಯಾದ ಬಳಿಕ ಸಿಆರ್ಪಿಎಫ್ ಕಾನ್ಸ್ಟೇಬಲ್ ಎಸ್ಕೇಪ್ ಆರೋಪ: ಠಾಣೆ ಮುಂದೆ ಯುವತಿ ಪ್ರತಿಭಟನೆ
'ಮೇ 9ಕ್ಕೆ ಎರಡೂ ಮನೆಯವರು ಮದುವೆ ನಿಶ್ಚಯ ಮಾಡಿ, ಕಲ್ಯಾಣ ಮಂಟಪವನ್ನೂ ಬುಕ್ ಮಾಡಿದ್ದೆವು. ಆದರೆ, ಇದೀಗ ಹುಡುಗ ಮದುವೆ ಬೇಡ ಅಂತಿದ್ದಾನೆ. ನಾನು ಮದುವೆಯಾಗಬೇಕೆಂದರೆ ನೀನು ಕೆಲಸ ಬಿಡಬೇಕು ಎಂದು ಹೇಳಿ ಹುಡುಗಿಯನ್ನೂ ಕೆಲಸದಿಂದಲೂ ಬಿಡಿಸಿದ್ದಾನೆ. ಇವೆಲ್ಲಾ ಆದಮೇಲೆ ನನ್ನಿಷ್ಟದಂತೆ ನೀನು ನಡೆದುಕೊಳ್ಳುತ್ತಿಲ್ಲ ಎಂದು ಹೇಳಿ ಮದುವೆ ಬೇಡ ಎನ್ನುತ್ತಿದ್ದಾನೆ. ನನ್ನ ಮರ್ಯಾದೆ ಹೋಯ್ತು ಎಂದು ನೊಂದು ಹುಡುಗಿ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇದೀಗ ಪೊಲೀಸ್ ಠಾಣೆಯ ಮಟ್ಟಿಲೇರಿದ್ದಾಳೆ' ಎಂದು ಹುಡುಗಿಯ ಕುಟುಂಬಸ್ಥರು ಹೇಳಿದ್ದು, ಬೇಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
'ಮದುವೆ ನಿರಾಕರಿಸಲು ಕಾರಣ ಏನು ಎಂದು ಗೊತ್ತಿಲ್ಲ. ನನಗೆ ನ್ಯಾಯ ಒದಗಿಸಿಕೊಡಿ' ಎಂದು ಹುಡುಗಿ ಅಳಲು ತೋಡಿಕೊಂಡಿದ್ದಾಳೆ.