ಸಕಲೇಶಪುರ: ಹಬ್ಬಕ್ಕೆಂದು ಊರಿಗೆ ಬಂದಿದ್ದ ಯುವಕನೋರ್ವ ಜಲಪಾತದಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಾಡುಮನೆ ಸಮೀಪ ಗುಡಾಣಕೆರೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮಾರನಹಳ್ಳಿ ಗ್ರಾಮದ ನಾಗೇಶ್ ಎಂಬುವರ ಪುತ್ರ ರತನ್ (26) ಮೃತ ಯುವಕ. ಈತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ರಾತ್ರಿಯಷ್ಟೇ ಬೆಂಗಳೂರಿನಿಂದ ಮಹಾಲಯ ಅಮವಾಸ್ಯೆ ಅಂಗವಾಗಿ ಊರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಜಲಪಾತದಲ್ಲಿ ಜಾರಿ ಬಿದ್ದು ಯುವಕ ಸಾವು ಗುರುವಾರ ತನ್ನ ಕುಟುಂಬದ ಇತರ ನಾಲ್ಕು ಜನ ಸಂಬಂಧಿಕರ ಜೊತೆ ಗುಡಾಣಕೆರೆ ಸಮೀಪವಿರುವ ಅಬ್ಬಿಗುಂಡಿ ಜಲಪಾತಕ್ಕೆ ಮಧ್ಯಾಹ್ನದ ವೇಳೆಗೆ ಬಂದಿದ್ದರು. ಈ ವೇಳೆ ಜೊತೆಯಲ್ಲಿದ್ದ ಒಬ್ಬರಿಗೆ ಮೊಬೈಲ್ ಕೊಟ್ಟು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಮೇಲಿಂದ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುತ್ತಾನೆ.
ಮುಳುಗುತಜ್ಞರ ಸಹಾಯದಿಂದ ಮೃತದೇಹವನ್ನು ತೆಗೆಯಲಾಯಿತು. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪಿಎಸ್ಐ ಚಂದ್ರಶೇಖರ್ ಸೇರಿದಂತೆ ಇತರರು ಭೇಟಿ ನೀಡಿದ್ದರು. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮೃತನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.