ಹಾಸನ: ಕಾಣೆಯಾಗಿದ್ದ ವೃದ್ಧೆಯೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಹಾಲುತೊರೆ ಗ್ರಾಮದಲ್ಲಿ ನಡೆದಿದೆ.
ಪುಟ್ಟಮ್ಮ (50) ಶವವಾಗಿ ಪತ್ತೆಯಾದ ವೃದ್ಧೆ. ಗ್ರಾಮದ ಹೊರವಲಯದಲ್ಲಿರುವ ನಡುತೋಪಿನಲ್ಲಿ ಮಹಿಳೆಯನ್ನ ಕೊಲೆಗೈದು ನಂತರ ಶವವನ್ನು ಹೂತಿಟ್ಟಿದ್ದು, ಪ್ರಕರಣ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಕೊಲೆಯಾಗಿರುವ ಪುಟ್ಟಮ್ಮ ನಿನ್ನೆ ಜಾನುವಾರು ಮೇಯಿಸಿ ಬರಲು ಹೊಲಕ್ಕೆ ಹೋಗಿದ್ದರು ಎನ್ನಲಾಗಿದೆ. ಹೀಗೆ ದನ ಮೇಯಿಸಲು ಹೋಗಿದ್ದ ವೃದ್ಧೆ ವಾಪಸ್ ಮನೆಗೆ ಬಾರದ ಹಿನ್ನೆಲೆ ಆಕೆಯ ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿ ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇಂದು ಬೆಳಗ್ಗೆ ವೃದ್ಧೆಯ ಪೋಷಕರು ತಮ್ಮ ಜಮೀನಿನ ಸುತ್ತಮುತ್ತ ಹುಡುಕಾಟ ನಡೆಸುತ್ತಿರುವಾಗ ಆಕೆ ಎಲೆ ಹಾಕಿಕೊಳ್ಳುವ ಪುಟ್ಟ ಚೀಲ ಹಾಗೂ ಮೊಬೈಲ್ ಮತ್ತು ಪರ್ಸ್ ಸಿಕ್ಕಿದೆ. ನಂತರ ಅನುಮಾನದಿಂದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಆಕೆಯ ದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ಎಂಬುದು ತಿಳಿದುಬಂದಿದ್ದು, ದುಷ್ಕರ್ಮಿಗಳ ಹುಡುಕಾಟಕ್ಕೆ ಪೊಲೀಸರು ಎರಡು ತಂಡ ರಚಿಸಿದ್ದಾರೆ.
ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚಿನ್ನ, ಒಡವೆ, ಆಸ್ತಿ ಮತ್ತು ಹಣಕ್ಕಾಗಿ ಒಂದಿಲ್ಲಾ ಒಂದು ರೀತಿಯ ಕೃತ್ಯಗಳು ನಡೆಯುತ್ತಿವೆ. ಈ ಕೃತ್ಯವೂ ಆಕೆ ತೊಟ್ಟಿದ್ದ ಒಡವೆಯ ಕಾರಣಕ್ಕೆ ನಡೆದಿರಬಹುದು ಎಂಬ ಅನುಮಾನವನ್ನು ಆಕೆಯ ಪೋಷಕರು ವ್ಯಕ್ತಪಡಿಸಿದ್ದಾರೆ.
ಓದಿ:ಸಾರಿಗೆ ಸಂಸ್ಥೆ ಖಾಸಗೀಕರಣಕ್ಕೆ ಬಿಡುವುದಿಲ್ಲ, ಸರ್ಕಾರ ದಾರಿ ತಪ್ಪಿದರೆ ಬೇರೆ ರೀತಿ ಹೋರಾಟ: ಕೋಡಿಹಳ್ಳಿ ಎಚ್ಚರಿಕೆ