ಹಾಸನ:ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯ ಸರಗಳ್ಳತನ ಮಾಡಲು ಯತ್ನಿಸಿ ವಿಫಲವಾದ ಬಳಿಕ ಆಕೆಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಗವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ನೀಲಮ್ಮ (50) ಸಾವನ್ನಪ್ಪಿದ ಮಹಿಳೆಯಾಗಿದ್ದಾಳೆ.
ವಾಯುವಿಹಾರ ಮುಗಿಸಿ ಕಾಲುದಾರಿಯಲ್ಲಿ ಮನೆಗೆ ಬರುವ ವೇಳೆ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಳ್ಳಲು ಖದೀಮನೊಬ್ಬ ಯತ್ನಿಸಿದ್ದಾನೆ. ಕಿತ್ತುಕೊಂಡು ಹೋಗಲು ಬಿಡದಿದ್ದಾಗ ಪಕ್ಕದಲ್ಲೇ ಇದ್ದ ಕೆರೆಗೆ ಆಕೆಯನ್ನು ತಳ್ಳಿ ಪರಾರಿಯಾಗಿದ್ದ. ಬಳಿಕ ಸ್ಥಳೀಯರು ಖದೀಮ ಮನೋಜ್ ಎಂಬಾತನನ್ನು ಸೆರೆ ಹಿಡಿದಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.
ನೌಕರ ಸಾವು:ವಿದ್ಯುತ್ ತಯಾರಿಕಾ ಘಟಕದ ಮೇಲ್ಛಾವಣಿ ಮೇಲಿಂದ ನೌಕರನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟ ಹಾಸನದಲ್ಲಿ ನಡೆದಿದೆ. ಬ್ಯಾಡರಹಳ್ಳಿ ಗ್ರಾಮದ ಸುರೇಶ್ ಗ್ರೀನ್ ಕೋ ಪವರ್ ಹೌಸ್ ಕಂಪನಿಯ ನೌಕರ. ಇಂದು ಬೆಳಗ್ಗೆ ತಾಂತ್ರಿಕ ದೋಷವಿದ್ದ ಕಾರಣ ರಿಪೇರಿ ಕೆಲಸಕ್ಕೆಂದು ಪವರ್ ಹೌಸ್ ಮೇಲ್ಭಾಗದ ಮೇಲ್ಛಾವಣಿ ಮೇಲೆ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿದ್ಯುತ್ ತಯಾರಿಕಾ ಘಟಕದ ನೌಕರ ಸಾವು ಸೇಫ್ ಬೆಲ್ಟ್ ಧರಿಸದೆ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ. 50 ಅಡಿ ಎತ್ತರದಿಂದ ಬಿದ್ದು ವ್ಯಕ್ತಿ ಸಾವಿಗೀಡಾಗಿದ್ದು, ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ. ಗೊರೂರು ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ವಿಜಯಪುರ: ಲಾರಿ-ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು