ಹಾಸನ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೆಮ್ಮಾರಿ ಕೊರೊನಾ ತನ್ನ ರುದ್ರನರ್ತನ ತೋರುತ್ತಿದ್ದು, ಇಂದು ಡೆಡ್ಲಿ ವೈರಸ್ ಎರಡನೇ ಬಲಿ ತೆಗೆದುಕೊಂಡಿದೆ.
ಹಾಸನದಲ್ಲಿ ಕೋವಿಡ್ಗೆ ಎರಡನೇ ಬಲಿ: 65 ವರ್ಷದ ಮಹಿಳೆ ಸಾವು - ಹಾಸನದಲ್ಲಿ ಕೋವಿಡ್ಗೆ ಎರಡನೇ ಬಲಿ
ಹತ್ತು ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಿದರೂ ಸ್ಪಂದಿಸದ ಮಹಿಳೆ, ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವ್ ಇರುವುದರಿಂದ ಸಂಬಂಧಿಕರ ಸಮ್ಮುಖದಲ್ಲಿ ಆಸ್ಪತ್ರೆಯ ಸಿಬ್ಬಂದಿಯಿಂದ ಅಂತ್ಯಕ್ರಿಯೆ ಮಾಡಿಸಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ.
ಮೃತರನ್ನು ನಗರದ ಉತ್ತರ ಬಡಾವಣೆಯ 65 ವರ್ಷದ ಮಹಿಳೆ ಎಂದು ಗುರುತಿಸಲಾಗಿದೆ. ಇವರು ಜೂನ್ 17 ರಂದು ಮುಂಬೈನಿಂದ ಹಾಸನಕ್ಕೆ ಬಂದಿದ್ದರು. ಮೊದಲೇ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಗೆ ದೂರದ ಪ್ರಯಾಣ ಮಾಡಿದ ಬಂದ ಬಳಿಕ ತೀವ್ರ ಜ್ವರ ಕೂಡ ಕಾಣಿಸಿಕೊಂಡಿತ್ತು. ಮುಂಬೈಯಿಂದ ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಕುಟುಂಬದ ಸದಸ್ಯರ ಸ್ಯಾಂಪಲ್ಸ್ ಸಂಗ್ರಹಿಸಿ ಪರಿಕ್ಷೆಗೆ ಕಳುಹಿಸಿತ್ತು. ವರದಿಯಲ್ಲಿ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಹಾಸನದ 9 ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಹತ್ತು ದಿನಗಳಿಂದ ನಿರಂತರವಾಗಿ ಚಿಕಿತ್ಸೆ ನೀಡಿದರು ಸ್ಪಂದಿಸದ ಮಹಿಳೆ, ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವ್ ಇರುವುದರಿಂದ ಸಂಬಂಧಿಕರ ಸಮ್ಮುಖದಲ್ಲಿ ಆಸ್ಪತ್ರೆಯ ಸಿಬ್ಬಂದಿಯಿಂದ ಅಂತ್ಯಕ್ರಿಯೆ ಮಾಡಿಸಲು ಆರೋಗ್ಯ ಇಲಾಖೆ ತಯಾರಿ ನಡೆಸಿದೆ. ಜೂನ್ 12 ರಂದು ಪಾಸಿಟಿವ್ ಬಂದಿದ್ದ ಹಾಸನ ಮೂಲದ ಪುರುಷರೊಬ್ಬರು ಕೂಡ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಕೋವಿಡ್ಗೆ ಎರಡನೇ ಬಲಿಯಾದಂತಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 331 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸರ್ಕಾರಿ ಕಛೇರಿಗಳು, ಬಡಾವಣೆಗಳು ಮತ್ತು ಕೆಲ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.