ಹಾಸನ : ರಾಜ್ಯದ ಜನ ಸ್ಥಿರ ಸರ್ಕಾರ ಬಯಸಿದ್ದರಿಂದಲೇ ಬಿಜೆಪಿ ಬೆಂಬಲಿಸಿದ್ದಾರೆ. ಅನರ್ಹ ಶಾಸಕರ ಪೈಕಿ 12 ಜನ ಗೆಲ್ಲಬೇಕೆಂದರೆ ಚುನಾವಣೆಗೂ ಮುನ್ನ ಸಿಎಂ ಯಡಿಯೂರಪ್ಪ ತೋರಿದ ಮಂತ್ರಿ ಆಸೆ ನಂಬಿ ಜನ ಮತ ಹಾಕಿದ್ದಾರೆ. ಇಂದು ಗೆದ್ದ ಶಾಸಕರದ್ದು ತಾತ್ಕಾಲಿಕ ಗೆಲುವಾಗಿದೆ. ನಮ್ಮ ಸೋಲು ಕೂಡ ತಾತ್ಕಾಲಿಕ. ಮುಂದಿನ ದಿನಗಳಲ್ಲಿ ಸಂಘಟನೆ ಮೂಲಕ ಪಕ್ಷ ಬಲಪಡಿಸಿ ಚುನಾವಣೆ ಎದುರಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸದರು.
ಗೆಲುವು-ಸೋಲು ಕೇವಲ ತಾತ್ಕಾಲಿಕ.. ಜೆಡಿಎಸ್ ಸಾರಥಿ ಹೆಚ್ ಕೆ ಕುಮಾರಸ್ವಾಮಿ - ಮಂತ್ರಿ ಆಸೆಯನ್ನು ನಂಬಿ ಜನ ಮತ ಹಾಕಿದ್ದಾರೆ.
ರಾಜಕೀಯದಲ್ಲಿ ಗೆಲುವು ಸೋಲು ಶಾಶ್ವತವಲ್ಲ. ಕೇವಲ ತಾತ್ಕಾಲಿಕ ಮಾತ್ರ. ಗೆದ್ದವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂಬ ಕಾರಣಕ್ಕಾಗಿ ಜನ ಅವರನ್ನು ಗೆಲ್ಲಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಬಿಜೆಪಿಯವರು ಜನರಿಗೆ ಅನೇಕ ಆಮಿಷವೊಡ್ಡಿ ಚುನಾವಣೆ ನಡೆಸಿದ್ದಾರೆ. ಈಗ ಬಿಜೆಪಿಗೆ ಸಂಪೂರ್ಣ ಬೆಂಬಲವಿದೆ. ಅಭಿವೃದ್ಧಿ ಮಾಡಿ ತೋರಿಸಲಿ. ಚುನಾವಣೆ ಸೋಲಿನ ಬಗ್ಗೆ ಈಗಾಗಲೇ ನಮ್ಮ ವರಿಷ್ಠರ ಜೊತೆ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದೇವೆ. 1989ರಲ್ಲಿ ನಾವು ಕೇವಲ 2 ಸ್ಥಾನಗಳನ್ನ ಗೆದ್ದಿದ್ದೆವು. ನಂತರ 1994ರ ಹೊತ್ತಿಗೆ 116 ಸ್ಥಾನಗಳನ್ನು ಗೆಲ್ಲುವ ಮುಖಾಂತರ ಆಡಳಿತ ಹಿಡಿದೆವು. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದರು.
ಜೆಡಿಎಸ್‌ನ ಕೆಲ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದು ಶುದ್ಧ ಸುಳ್ಳು. ಯಾರೂ ಕೂಡ ಪಕ್ಷ ಬಿಡುವುದಿಲ್ಲ. ಪಕ್ಷ ಬಿಟ್ಟರೆ ಎದುರಾಗುವ ಸವಾಲುಗಳು ಎಲ್ಲರಿಗೂ ತಿಳಿದಿದೆ. ಉಪ ಚುನಾವಣೆ ಫಲಿತಾಂಶ ನನಗೂ ವೈಯಕ್ತಿಕವಾಗಿ ಬೇಸರವಾಗಿದೆ. ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂಬುದು ಊಹಾಪೋಹ. ನಮ್ಮ ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಜೆಡಿಎಸ್ ಯುವ ರಾಜ್ಯಾಧ್ಯಕ್ಷರ ಸ್ಥಾನವನ್ನ ನಿಖಿಲ್ ಕುಮಾರಸ್ವಾಮಿಯವರು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಅದನ್ನು ಬದಲಿಸುವ ಯಾವ ಪ್ರಸ್ತಾಪವೂ ನಮ್ಮ ಮುಂದಿಲ್ಲ ಎಂದರು.