ಹಾಸನ : ಅನೈತಿಕ ಸಂಬಂಧ ಹೊಂದಿದ್ದಲ್ಲದೇ ತಾಳಿ ಕಟ್ಟಿದ ಹೆಂಡತಿಗೆ ಚಿತ್ರಹಿಂಸೆ ನೀಡಿ ಆಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದಿದ್ದ ಪ್ರಕರಣವನ್ನು ಪತ್ತೆಹಚ್ಚಿದ ಇಲ್ಲಿನ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಗರಾಜ್ (28) ಮೋಹನ (24) ಶೈಲ (27) ಬಂಧಿತ ಆರೋಪಿಗಳು.
ಏನಿದು ಪ್ರಕರಣ:
ಕೊಲೆಯಾದ ಸುಶ್ಮಿತಾ ಮತ್ತು ಆರೋಪಿ ನಾಗರಾಜ್ 6 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ವರ್ಷದ ಮುದ್ದಾದ ಓರ್ವ ಮಗಳು ಸಹ ಇದ್ದಾಳೆ. ಆರೋಪಿ ನಾಗರಾಜ್ ಪರಸ್ತ್ರೀ ಸಂಗ ಮಾಡಿದ್ದಲ್ಲದೇ ಆಕೆಯ ಮಾತಿಗೆ ಮರುಳಾಗಿ ಪ್ರತಿದಿನ ಹೆಂಡತಿಗೆ ಚಿತ್ರಹಿಂಸೆ ನೀಡುತ್ತಿದ್ದ.
ಕೊನೆ ಕೊನೆಗೆ ಆಕೆ ಮನೆ ಬಿಟ್ಟು ಹೋಗುವಂತೆಯೂ ಮಾಡಿದ್ದ. ಹಿಂಸೆ ತಾಳಲಾರದೇ ಸುಶ್ಮಿತಾ ತವರು ಮನೆಯಲ್ಲೇ ಇದ್ದಳು. ವರ್ಷದ ಬಳಿಕ ಸುಶ್ಮಿತಾ ಬದುಕಿನ ಬಂಡಿ ಸಾಗಿಸಲು ಅರಸೀಕೆರೆಯ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಸೇರಿದ್ದಳು. ನಂತರ ಸುಶ್ಮಿತಾ ಜೀವನಾಂಶ ಕೋರಿ ತನ್ನ ಗಂಡ ನಾಗರಾಜು ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದು, ಇವರಿಬ್ಬರ ಪ್ರಕರಣ ತನಿಖೆ ಹಂತದಲ್ಲಿತ್ತು. ಇದರ ಮಧ್ಯೆ ಈ ಕೊಲೆ ನಡೆದಿದೆ.
ಸ್ವಗ್ರಾಮಕ್ಕೆ ಕರೆಸಿಕೊಂಡು ಕೊಲೆ:
ಜೀವನಾಂಶಕ್ಕೆ ಕೋರಿದ್ದ ಮಾಹಿತಿ ಕಲೆಹಾಕಿದ್ದ ಆರೋಪಿ ನಾಗರಾಜ್, ಆಕೆಯನ್ನು ಪುಸಲಾಯಿಸಿ ಬೆಲಗೂರಿನ ತನ್ನ ಹಳೆಯ ಮನೆಗೆ ಕರೆಸಿಕೊಂಡಿದ್ದನು. ಸಿಟ್ಟು ಇಟ್ಟುಕೊಂಡಿದ್ದ ನಾಗರಾಜ್, ಸಹೋದ ಮೋಹನ್ ಕುಮಾರ್ ಹಾಗೂ ಅಕ್ರಮ ಸಂಬಂಧ ಹೊಂದಿದ್ದ ಶೈಲಾ ಜೊತೆಗೂಡಿ ಆಕೆಯನ್ನು ಅಲ್ಲಿಯೇ ಕೊಲೆ ಮಾಡಿದ್ದನು. ಬಳಿಕ ಯಾರಿಗೂ ಗೊತ್ತಾಗದಂತೆ ಸುಶ್ಮೀತಾಳ ಶವವನ್ನ ದುದ್ದ ಗ್ರಾಮದ ಬಳಿಯ ಚೀರನಹಳ್ಳಿ ಕೆರೆಗೆ ಬಿಸಾಡಿ ಹೋಗಿದ್ದರು.
ಈ ಬಗ್ಗೆ ದುಡ್ಡ ಪೊಲೀಸ್ ಠಾಣೆಯಲ್ಲಿ ಅನಾಮಿಕ ಶವಪತ್ತೆ ಎಂಬ ಪ್ರಕರಣ ದಾಖಲಾಗಿತ್ತು. ಅದರಂತೆ ಶವದ ಪತ್ತೆಗಾಗಿ ಮಡಿಕೇರಿ, ಮೈಸೂರು, ಬೆಂಗಳೂರು, ಯಾದಗಿರಿ, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಚಿತ್ರದುರ್ಗ ಕಡೆಗಳಿಗೆ ಪೊಲೀಸರು ಮಾಹಿತಿಯನ್ನು ರವಾನಿಸಿದ್ದರು. ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಶ್ಮಿತಾ ಕಾಣೆಯಾಗಿರುವ ಬಗ್ಗೆ ಅ. 29ರಂದು ಪ್ರಕರಣ ದಾಖಲಾಗಿತ್ತು.
ಕಲ್ಲು ಕಟ್ಟಿ ಶವವನ್ನು ಕೆರೆಗೆ ಎಸೆದ ಕಿರಾತಕರು:
ಪ್ರಕರಣವನ್ನು ಕೈಗೆತ್ತಿಕೊಂಡ ದುದ್ದ ಪೊಲೀಸರು ಮೊದಲಿಗೆ ಸುಶ್ಮಿತಾ ಪತಿ ನಾಗರಾಜು ನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಯು ಕೊಲೆ ಮಾಡಿದ ಇಂಚಿಂಚು ಮಾಹಿತಿಯನ್ನು ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.
ಜೀವನಂಶ ಕೋರಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ಮತ್ತು ನನ್ನ ಅಕ್ರಮ ಸಂಬಂಧಕ್ಕೆ ಕಂಟಕವಾಗಿದ್ದ ನನ್ನ ಪತ್ನಿಯನ್ನು ನಾನು ಮತ್ತು ನನ್ನ ತಮ್ಮ ಹಾಗೂ ಶೈಲಾ ಸೇರಿಕೊಂಡು ಕೊಲೆಗೂದಿರುವುದು ಮತ್ತು ಸಾಕ್ಷಿ ನಾಶಕ್ಕಾಗಿ ಕಲ್ಲು ಕಟ್ಟಿ ಶವವನ್ನು ಕೆರೆಗೆ ಎಸೆದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.
ಕೊಲೆ ಪ್ರಕರಣ ಪತ್ತೆಹಚ್ಚಿದ ಹಾಸನ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದಿದ ಪೊಲೀಸರು ಕೃತ್ಯ ನಡೆದಿದ್ದರೂ ಕೂಡ ಮಾಹಿತಿ ನೀಡಿದ ಹಿನ್ನೆಲೆ ಆರೋಪಿ ನಾಗರಾಜ ತಂದೆ ಈಶ್ವರ ರಾವ್ ಮತ್ತು ತಾಯಿ ಜಯಂತಿಯನ್ನು ಕೂಡ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.