ಹಾಸನ: ನಗರಸಭೆಯಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ನ್ಯಾಯ ದೊರಕುವವರೆಗೂ ನಮ್ಮ ಚಳುವಳಿ ನಿರಂತರವಾಗಿತ್ತದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಅಕ್ಮಲ್ ಜಾವಿದ್ ಎಚ್ಚರಿಸಿದರು.
ಹಾಸನ ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಅಕ್ಮಲ್ ಜಾವಿದ್ ಆರೋಪ - ಹಾಸನ
ಕರ್ತವ್ಯ ನಿರ್ಲಕ್ಷ್ಯದಿಂದ ನಗರಸಭೆಗೆ ಸೇರಿದ ಜಾಗಗಳಲ್ಲಿ ಅಕ್ರಮಗಳು ಎದ್ದು ಕಾಣುತ್ತಿವೆ. ಇದಕ್ಕೆ ಮುಖ್ಯ ಕಾರಣ ನಗರಸಭೆ ಆಯುಕ್ತರು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಸಂಚಾಲಕ ಅಕ್ಮಲ್ ಜಾವಿದ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ತವ್ಯ ನಿರ್ಲಕ್ಷ್ಯದಿಂದ ನಗರಸಭೆಗೆ ಸೇರಿದ ಜಾಗಗಳಲ್ಲಿ ಅಕ್ರಮಗಳು ಎದ್ದು ಕಾಣುತ್ತಿವೆ. ಇದಕ್ಕೆ ಮುಖ್ಯ ಕಾರಣ ನಗರಸಭೆ ಆಯುಕ್ತರು. ಈ ಅಕ್ರಮದಿಂದ ನಗರಸಭೆಗೆ ಸೇರಿದ ಕೋಟಿಗಟ್ಟಲೆ ಮೌಲ್ಯದ ಆಸ್ತಿ ಬೇರೆಯವರ ಪಾಲಾಗುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ ನಗರಸಭೆ ವ್ಯಾಪ್ತಿಯಲ್ಲಿ ಬರುವ 35ನೇ ವಾರ್ಡಿನ ಚರಂಡಿಗಳನ್ನು ಸ್ವಚ್ಛತೆ ಮಾಡಲು ವಿಫಲವಾಗಿದ್ದಾರೆ. ಇದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಗರಸಭೆ ಆಯುಕ್ತರ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ ಎಂದು ದೂರಿದರು.
ನಗರದ ಸ್ವಚ್ಛತೆಯ ಬಗ್ಗೆ ಇಂದಿನ ಪೌರಾಯುಕ್ತರು, ಸರ್ಕಾರಿ ಸೌಲಭ್ಯ ಪಡೆಯುವ ಅಧಿಕಾರಿಗಳು ಎಷ್ಟು ಬಾರಿ ನಗರ ಪ್ರದಕ್ಷಿಣೆ ಮಾಡಿದ್ದಾರೆ? ನಗರದ ಮುಖ್ಯ ರಸ್ತೆ ಬಳಿ ನಿರ್ಗತಿಕರು ಕೊಲೆಯಾಗುತ್ತಿದ್ದರೂ ಸಹ ಎಚ್ಚೆತ್ತುಕೊಳ್ಳದ ನಗರಸಭೆಯು ನಿರ್ಲಕ್ಷ್ಯ ಪ್ರದರ್ಶಿಸುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಈಗಿರುವ ಪೌರಾಯುಕ್ತ ಕೃಷ್ಣಮೂರ್ತಿಯವರ ಅವಧಿಯಲ್ಲಿ ಅಕ್ರಮ ಕಟ್ಟಡಗಳು ಎಷ್ಟು ನಿರ್ಮಾಣವಾಗಿವೆ? ಇದರ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಗರದ ಜನತೆಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ಇವರ ಅವಧಿಯಲ್ಲಿ ನಿರ್ಮಾಣವಾಗಿರುವ ಚರಂಡಿಗಳು, ಕಾಂಕ್ರೀಟ್ ರಸ್ತೆ, ಇತರೆ ಕಾಮಗಾರಿಗಳು ಯಾವ ಗುಣಮಟ್ಟದಿಂದ ಕೂಡಿವೆ ಎಂಬುದನ್ನು ತನಿಖೆ ಮಾಡಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು. ಇಂತಹ ಭ್ರಷ್ಟ ಅಧಿಕಾರಿಯನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.