ಹಾಸನ:ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂಬೇಡ್ಕರ್ ಜೀವನಾಧಾರಿತ ಮಹಾನಾಯಕ ಧಾರವಾಹಿಯ ಫ್ಲೆಕ್ಸ್ ಹಾಕಲು ಜಿಲ್ಲಾಡಳಿತ ನಿಬಂಧನೆಗಳನ್ನು ಹೇರಿದರೆ ಜಿಲ್ಲಾಡಳಿತದ ವಿರುದ್ಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಮುಖಂಡ ಆರ್. ಪಿ. ಐ. ಸತೀಶ್ ಎಚ್ಚರಿಕೆ ನೀಡಿದರು.
ಮಹಾನಾಯಕ ಧಾರವಾಹಿಯ ಪ್ಲೆಕ್ಸ್ ಹಾಕಲು ನಿಬಂಧನೆ ಸಲ್ಲದು: ದಲಿತ ಮುಖಂಡ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಬದುಕು ಬವಣೆ ತಿಳಿದುಕೊಳ್ಳಲು ಹಾಗೂ ಸಂವಿಧಾನ ಬಗ್ಗೆ ಅರಿಯಲು ಮಹಾನಾಯಕ ಧಾರವಾಹಿ ತುಂಬ ಸಹಕಾರಿಯಾಗಿದ್ದು, ಹಳ್ಳಿ ಜನರಿಗೆ ಹಾಗೂ ಅಂಬೇಡ್ಕರ್ ಅಭಿಮಾನಿಗಳಿಗೆ ಸಹಕಾರಿಯಾಗಿದೆ. ಇದನ್ನು ಸಹಿಸದ ಜಾತಿವಾದಿ ಹಾಗೂ ಕೋಮುವಾದಿ ಮನಸ್ಸುಗಳು ಅವರ ಫೋಟೋ ಇರುವ ಫ್ಲೆಕ್ಸ್ ಗಳನ್ನು ಹರಿದು ಹಾಕುತ್ತಿರುವುದು ಖಂಡನಾರ್ಹ ಎಂದರು.
ಜಿಲ್ಲೆಯಲ್ಲಿ ಬೇರೆ ಯಾವುದೇ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕಲು ಜಿಲ್ಲಾಡಳಿತ ನಿಬಂಧನೆಗಳನ್ನು ಹೇರುವುದಿಲ್ಲ. ಆದರೆ, ಮಹಾನಾಯಕ ಫ್ಲೆಕ್ಸ್ ಹಾಕಲು ನಿಯಮ ರೂಪಿಸುವುದು ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನವಾಗಿದೆ. ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಇಂತಹ ನಿರ್ಧಾರ ತೆಗೆದುಕೊಳ್ಳಬಾರದು. ಫ್ಲೆಕ್ಸ್ ಹಾಕಿದರೆ ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು. ಜಿಲ್ಲಾಡಳಿತ ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ನಿಬಂಧನೆ ಹೇರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವೊಂದು ಗ್ರಾಮದಲ್ಲಿ ಜಾತ್ಯಾತೀತವಾಗಿ ಫ್ಲೆಕ್ಸ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಇನ್ನು ಕೆಲವು ಗ್ರಾಮಗಳಲ್ಲಿ ಜಾತಿಯ ಮನಸ್ಸುಗಳು ಅವಮಾನ ಮಾಡುತ್ತಿವೆ. ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ. ಅವರು ರಾಷ್ಟ್ರ ನಾಯಕರಾಗಿದ್ದು ಇವರ ಧಾರವಾಹಿ ನೋಡುವ ಮೂಲಕ ಅವರಿಗೆ ಗೌರವ ನೀಡಬೇಕು ಎಂದರು.
ಆಲೂರು ತಾಲ್ಲೂಕಿನ ಸರ್ಕಲ್‌ಇನ್ಸ್‌ಪೆಕ್ಟರ್ ಫ್ಲೆಕ್ಸ್ ಹಾಕಿದರೆ ವಿವಿಧ ಕೋಮುಗಳ ನಡುವೆ ವೈಮನಸ್ಸು ಉಂಟಾಗುತ್ತದೆ. ಆದ್ದರಿಂದ ಅನಧಿಕೃತವಾಗಿ ಹಾಕಿರುವ ಫ್ಲೆಕ್ಸ್ ತೆರವುಗೊಳಿಸಲು ಗ್ರಾ. ಪಂ. ಪಿಡಿಓಗಳಿಗೆ ನಿರ್ದೇಶನ ನೀಡಬೇಕು ಎಂದು ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರಬರೆದಿರುವುದು ಖಂಡನೀಯವಾಗಿದ್ದು ಇದಕ್ಕೆ ಯಾರು ಹೆದರಬೇಕಿಲ್ಲ. ರಕ್ಷಣೆ ನೀಡಬೇಕಾದ ಪೊಲೀಸರು ತಮ್ಮ ವೈಫಲ್ಯಮುಚ್ಚಿಕೊಳ್ಳಲು ಪ್ರಯತ್ನಿತ್ತಿದ್ದಾರೆ. ಪ್ಲೆಕ್ಸ್ ಹರಿದು ಹಾಕುವ ಆರೋಪಿ ಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.