ಹಾಸನ:ಕೊರೊನಾ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಲಾಕ್ಡೌನ್ ಆಗಿದೆ. ಜಿಲ್ಲೆಗೆ ಜನರು ಬರುವುದನ್ನು ಹಾಗೂ ಇಲ್ಲಿಂದ ಹೊರಗೆ ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಬೇರೆ ಜಿಲ್ಲೆಗೆ ಹೋಗಲಾಗದೆ ಇದ್ದವರಿಗೆ ಆಹಾರ ವ್ಯವಸ್ಥೆ ಮಾಡಿದ್ದೇವೆ. ಅವರಿರುವ ಸ್ಥಳಕ್ಕೆ ಆಹಾರ ಸಾಮಗ್ರಿ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಯುಗಾದಿ ಹಬ್ಬದ ನಿಮಿತ್ತ ಎರಡು ದಿನಗಳಲ್ಲಿ ಬೆಂಗಳೂರಿನಿಂದ 4 ಸಾವಿರ ಜನರು ಜಿಲ್ಲೆಗೆ ಬಂದಿದ್ದು, ಅವರಲ್ಲಿ ವಿದೇಶದಿಂದ ಸುಮಾರು 90 ಜನರು ಬಂದಿದ್ದಾರೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗೆ ಭೇಟಿ ನೀಡಿ ಎಲ್ಲರ ವಿವರ ಪಡೆಯುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸೂಪರ್ ಸ್ಪೆಷಲ್ ಐಸೋಲೇಷನ್ (ಎಸ್‌ಎಸ್‌ಐ) ಹಾಗೂ ಫೀವರ್ ಸೆಂಟರ್ ತೆರೆಯಲು ಸೂಚಿಸಿದ್ದು, ಇಂದಿನಿಂದ ಕಾರ್ಯಾರಂಭ ಮಾಡಲಿದೆ.
ಮಾಸ್ಕ್‌ಗೆ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಿಮತ್ ಸಿಂಗ್ ಕಾ ಗಾರ್ಮೆಂಟ್ಸ್‌ನಿಂದ ನಿತ್ಯ 3 ಸಾವಿರ ಮಾಸ್ಕ್ ತಯಾರಿಸಲಾಗುತ್ತಿದೆ. ಇತರ ಫ್ಯಾಕ್ಟರಿಗಳಿಗೂ ಮಾಸ್ಕ್ ಪೂರೈಸುವಂತೆ ಸೂಚಿಸಿದ್ದು, ಜಿಲ್ಲಾಧಿಕಾರಿ ನಿಧಿಗೆ ಬಿಡುಗಡೆಯಾಗಿರುವ 1.20 ಲಕ್ಷ ರೂ.ಗಳಲ್ಲಿ ಮಾಸ್ಕ್ ಹಾಗೂ ವೆಂಟಿಲೇಟರ್ ಖರೀದಿ ಮಾಡಲಾಗುತ್ತದೆ ಎಂದರು.
ಸಾರ್ವಜನಿಕರು ವದಂತಿಗಳಿಗೆ ಹೆದರಬಾರದು. ಈ ಕುರಿತು ಪ್ರತಿದಿನ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಕುವಾರು ಮಾಹಿತಿ ಪಡೆಯಲಾಗುತ್ತಿದೆ. ಏ. 14ರ ವರೆಗೆ ಮನೆಯಲ್ಲಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕೆಂದು ಮನವಿ ಮಾಡಿದರು.