ಹಾಸನ:ಸಕಲೇಶಪುರ ಸುತ್ತಮುತ್ತ ಹಲವು ವರ್ಷಗಳಿಂದ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಹಿಂದಿನ ಸರ್ಕಾರ ವಿಫಲವಾಗಿದ್ದು, ಈ ಸಮಸ್ಯೆ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದಲ್ಲಿ ನಡೆದ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಡಾನೆ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಫೆ.16 ರಂದು ಸಕಲೇಶಪುರ ಪಟ್ಟಣದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಆನೆ ಹಾವಳಿಗೆ ತುತ್ತಾದ ಬೆಳೆಗಾರರನ್ನು ಹಾಗೂ ಗ್ರಾಮಸ್ಥರನ್ನು ಆಹ್ವಾನಿಸಲಾಗಿದೆ. ಕಳೆದೆರಡು ತಿಂಗಳಲ್ಲಿ ಆನೆ ದಾಳಿಗೆ ಈಗಾಗಲೇ 5 ಜನರು ಸಾವನ್ನಪ್ಪಿದ್ದು, ಇಲ್ಲಿ ಅವರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.
ಆನೆ ಕಾರಿಡಾರ್ ನಿರ್ಮಾಣ ಸಂಬಂಧ ಹಿಂದಿನ ಸರ್ಕಾರ ಕೈಗೊಂಡ ನಿರ್ಣಯ ಹಾಗೂ ಇತ್ತೀಚಿನ ದಿನಗಳಲ್ಲಿ ನಮ್ಮ ಸರ್ಕಾರ ಕೈಗೊಂಡ ಕೆಲಸಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಈಗಾಗಲೇ ಪುಂಡಾನೆ ಸೆರೆ ಸೇರಿದಂತೆ 3 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿದ್ದು, ಕಾರಿಡಾರ್ ನಿರ್ಮಾಣಕ್ಕೆ ಸಭೆಯಲ್ಲಿ ಜನರಿಂದ ಮಾಹಿತಿ ಪಡೆದು ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
2021ರ ಕೇಂದ್ರ ಬಜೆಟ್ ಐತಿಹಾಸಿಕ ಬಜೆಟ್ ಆಗಿದ್ದು, ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದೆ. ಪ್ರಮುಖವಾಗಿ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ, ಮೂಲಭೂತ ಸೌಕರ್ಯ, ಆರೋಗ್ಯ ಸೇರಿದಂತೆ ಇನ್ನಿತರೆ ವಲಯದಲ್ಲಿಯೂ ಕೂಡ ಹೆಚ್ಚು ಗಮನಹರಿಸಲಾಗಿದೆ ಎಂದು ಕೇಂದ್ರ ಬಜೆಟ್ಅನ್ನು ಸಮರ್ಥಿಸಿಕೊಂಡರು.