ಹಾಸನ:ಹೆಚ್ ಡಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ್ರು ಹಾಕಿರುವ ಸವಾಲನ್ನು ರೇವಣ್ಣನವರ ಕುಟುಂಬ ಯಾವತ್ತೋ ಸ್ವೀಕರಿಸಲಾಗಿದ್ದು, ಬೇಕಾದರೆ ಇನ್ನೂ ಹತ್ತು ಸವಾಲು ಹಾಕಿದರೂ ಸಿದ್ಧರಿದ್ದು, ಯಾವ ಕಾರಣಕ್ಕೂ ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಖಾರವಾಗಿ ಟಾಂಗ್ ಕೊಟ್ಟಿದ್ದರು.
ವಿಧಾನಸಭಾ ಚುನಾವಣೆ ಯುದ್ಧಕ್ಕೆ ಸಿದ್ಧರಿದ್ದೇವೆ:ನಗರದ ಹಾಸನಾಂಬ ದೇವಾಲಯದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನದ ಶಾಸಕ ಪ್ರೀತಂಗೌಡ ಹಾಕಿರುವ ಸವಾಲನ್ನು ರೇವಣ್ಣ ಕುಟುಂಬ ಆಗಲೆ ಸ್ವೀಕರಿಸಿದ್ದು, ಯಾವುದೇ ಕಾರಣಕ್ಕೂ ನಾವುಗಳು ಹಿಂದೆ ಹೋಗುವವರಲ್ಲ. ಇನ್ನೂ ಹತ್ತು ಸವಾಲು ಹಾಕಿದರೂ ಸ್ವೀಕರಿಸಲು ನೂರಕ್ಕೆ ನೂರರಷ್ಟು ಸಿದ್ದರಿದ್ದೇವೆ. ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆ ಯುದ್ಧಕ್ಕೆ ಸಿದ್ಧರಿದ್ದೇವೆ ಎಂದರು.
ಎಲ್ಲ ಸವಾಲಿಗೂ ನಾವು ಉತ್ತರ ಕೊಡುವುದಿಲ್ಲ: ಕಳೆದ ಎಂಪಿ ಚುನಾವಣೆಯಲ್ಲಿ ಹಾಸನ ತಾಲೂಕಿನಲ್ಲಿ ಬಿಜೆಪಿ 15 ಸಾವಿರ ಲೀಡ್ ಪಡೆಯಲಿದೆ. ಇಲ್ಲದಿದ್ದರೆ ನಾನು ಮತ್ತೆ ತಲೆ ಹಾಕುವುದಿಲ್ಲ ಎಂದಿದ್ದರು. ಆದರೆ, ನಾನು 16 ಸಾವಿರಕ್ಕೂ ಹೆಚ್ಚು ಲೀಡ್ ಪಡೆಯಲಿಲ್ಲವೇ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದರು. ಹಾಕಲಾಗಿರುವ ಎಲ್ಲ ಸವಾಲಿಗೂ ನಾವು ಉತ್ತರ ಕೊಡುವುದಿಲ್ಲ, ಅದಕ್ಕೆಲ್ಲ ನಮಗೆ ಜನ ಇದ್ದಾರೆ. ಅವರ ಮೂಲಕ ಯಾವುದೇ ಸವಾಲು ಎದುರಿಸಲು, ಸ್ವೀಕರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಹತ್ತು ದಿನಗಳ ಒಳಗೆ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ:ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ. ಎಲ್ಲವನ್ನೂ ಕ್ಲಿಯರ್ ಮಾಡಿಕೊಳ್ಳುತ್ತೇವೆ. ಶೀಘ್ರವೇ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು. ಮೈಸೂರು ಜಿಲ್ಲೆಯ ಹೆಚ್. ಡಿ ಕೋಟೆ, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ. ಹತ್ತು ದಿನಗಳ ಒಳಗೆ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ.