ಕರ್ನಾಟಕ

karnataka

ETV Bharat / state

ಮಳೆ ಕೊರತೆಯಿಂದ ಬರಿದಾದ ಹೇಮಾವತಿ ಒಡಲು: ಆತಂಕದಲ್ಲಿ ಹಾಸನ ಜನತೆ - etv bharat

ಮೇಲಿಂದ ಮೇಲೆ ಆವರಿಸುತ್ತಿರುವ ಬರಗಾಲ ನಾಡಿನ ಜನರನ್ನು ಚಿಂತೆಗೆ ತಳ್ಳಿದ್ದು ಸುಳ್ಳಲ್ಲ. ಭೀಕರ ಬಲಗಾಲದಿಂದ ಜಲಾಶಯದ ನೀರಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಗುಟುಕು ನೀರಿಗೂ ಪ್ರಾಣಿ-ಪಕ್ಷಿಗಳು, ಜಾನುವಾರುಗಳು, ಜಲಚರಗಳು ಅಷ್ಟೇ ಅಲ್ಲದೆ ಜನರು ಕೂಡ ಪರಿತಪಿಸುತ್ತಿದ್ದಾರೆ.

ಬರದ ಭೀಕರತೆಗೆ ಬರಿದಾಗುತ್ತಿರುವ ಹೇಮಾವತಿ ಒಡಲು

By

Published : May 3, 2019, 1:18 PM IST

Updated : May 3, 2019, 1:46 PM IST

ಹಾಸನ: ಬರದ ಭೀಕರತೆ ಎಷ್ಟಿದೆ ಅಂತ ತಿಳಿಯಲು ಈ ದೃಶ್ಯಗಳನ್ನ ನೋಡಿದ್ರೆ ಸಾಕು..! ಸರಿಯಾಗಿ ಮಳೆಯಾಗದ ಹಿನ್ನೆಲೆ ಜಿಲ್ಲೆಯ ಜೀವನದಿಯ ಒಡಲು ಕೂಡ ಬರಿದಾಗುತ್ತಿದೆ. ವರುಣ ಕೈ ಕೊಟ್ಟಿದ್ದರಿಂದ ಜಿಲ್ಲೆಯ ರೈತಾಪಿ ವರ್ಗ ಕೂಡ ಚಿಂತೆಗೀಡಾಗಿದೆ. ಇನ್ನು ಜಲಾಶಯದ ನೀರಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜಿಲ್ಲೆಯ ಜನರು ನೋವು ತೋಡಿಕೊಳ್ಳಲಾಂಭಿಸಿದ್ದಾರೆ.

ಕಾವೇರಿಯ ಉಪ ನದಿಗಳಲ್ಲಿ ಒಂದಾದ ಹೇಮಾವತಿಯ ಒಡಲು ಇದೀಗ ಬರಿದಾಗುತ್ತಾ ಹೋಗುತ್ತಿದೆ. ಜಾವಳಿ ಎಂಬ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಹುಟ್ಟುವ ಈ ನದಿ ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಹರಿದು ಕೆಆರ್​ಎಸ್​ ಹಿನ್ನೀರಿನ ಕಾವೇರಿ ನದಿಯನ್ನು ಸೇರುತ್ತೆ. ಸುಮಾರು 245 ಕಿ.ಮೀ. ಉದ್ದ ಹರಿಯುವ ಈ ನದಿಗೆ ಜಿಲ್ಲೆಯ ಗೊರೂರು ಗ್ರಾಮದಲ್ಲಿ ಅಡ್ಡವಾಗಿ ಅಣೆಕಟ್ಟೆಯೊಂದನ್ನು ಕಟ್ಟಿದ್ದು, ಇದೀಗ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯಲಾಂಭಿಸಿದೆ ಅನ್ನೋದು ಜಿಲ್ಲೆಯ ಜನರಲ್ಲಿ ಆತಂಕ ತರಿಸಿದೆ.

ನಮಗೇ ಇಲ್ಲ; ಇನ್ನು ನಿಮಗೆಲ್ಲಿ?

ಅಣೆಕಟ್ಟು ನಿರ್ಮಾಣದ ಬಳಿಕ ಜಿಲ್ಲೆಗೆ ನಾಲ್ಕು ಬಾರಿ ಜಲಕ್ಷಾಮ ಎದುರಾಗಿದೆ. 1987, 2003, 2005, ಬಿಟ್ಟರೆ ಈ ಬಾರಿ ಕೂಡ ಜಲಾಶಯಕ್ಕೆ ಭೀಕರ ಬರ ತಟ್ಟಿದೆ. ಜಲಾಶಯಕ್ಕೆ ಇಷ್ಟೊತ್ತಿಗಾಗಲೇ 5.8 ಟಿಎಂಸಿ ನೀರು ಸಂಗ್ರಹಣೆಯಾಗಬೇಕಾಗಿತ್ತು. ಆದ್ರೆ ಈ ಬಾರಿ ಕೇವಲ ಜಲಾಶಯಕ್ಕೆ 1.5 ಟಿಎಂಸಿ ನೀರು ಬಂದಿದ್ದು, ಡೆಡ್ ಸ್ಟೋರೆಜ್​​ ಸೇರಿ ಜಲಾಶಯದಲ್ಲಿ 5.67 ಟಿಎಂಸಿ ನೀರಿದೆ. ಜಲಾಶಯದಲ್ಲಿ 6 ಕ್ರೆಸ್ಟ್ ಗೇಟ್​​​ಗಳಿದ್ದು ಅವುಗಳಿಗೂ ನಿಲುಕದಂತೆ ನೀರು ಕೆಳಗೆ ಇಳಿದು ಹೋಗಿದೆ. ಹೀಗಾಗಿ ನದಿಪಾತ್ರವನ್ನ ನಂಬಿರುವ ರೈತರ ಪಾಡು ಹೇಳತೀರದಾಗಿದೆ. ಇಡೀ ಹಾಸನವೇ ಇಂದು ಕುಡಿಯುವ ನೀರಿಗೆ ಪರಿತಪಿಸುತ್ತಿದೆ. ಇನ್ನು ತಮಿಳುನಾಡಿಗೆ ಬಿಡುವುದಾದರೂ ಹೇಗೆ ಹೇಳಿ ಎಂದು ಪ್ರಶ್ನಿಸುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್.

ನೀರುಣಿಸುವ ಹೇಮಾವತಿ:

ಹೇಮಾವತಿಯ ಜಲಾಶಯವನ್ನ ಕಟ್ಟಿ ನಾಲ್ಕೂವರೆ ದಶಕಗಳು ಕಳೆದವು. ಈ ಹಿಂದೆ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದರಿಂದ 37.103 ಸಾಮಾರ್ಥ್ಯದ ನೀರು ಸಂಗ್ರಹ ಮಾಡೋ ಹೇಮಾವತಿ ಜಲಾಶಯ ಲೋಕಾರ್ಪಣೆಯಾಗಿದ್ದು ಇದೀಗ ಇತಿಹಾಸ. ಈ ಹೇಮಾವತಿ ಜಲಾಶಯ ಒಟ್ಟು 6.55 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತಿದೆ. ಇನ್ನು ಹಾಸನ ನಗರಕ್ಕೆ ಪ್ರತಿ ವರ್ಷ ಕುಡಿಯುವ ನೀರಿಗಾಗಿ 4 ಟಿಎಂಸಿ ನೀರು ಬೇಕಾಗುತ್ತದೆ. ಇಷ್ಟೇ ಅಲ್ಲದೇ ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕೂಡ ಕುಡಿಯುವ ನೀರಿಗಾಗಿ ಈ ಜಲಾಶಯವನ್ನೇ ನಂಬಿವೆ.

ಬರದ ಭೀಕರತೆಗೆ ಬರಿದಾಗುತ್ತಿರುವ ಹೇಮಾವತಿ ಒಡಲು

1987, 2001, 2002, 2003, 2004, 2005, 2016 ಹಾಗೂ 2017 ಸೇರಿದಂತೆ ಈ ಬಾರಿಯೂ ಜಲಾಶಯ ತುಂಬದೇ ಖಾಲಿಯಾಗಿದೆ. ಒಳ ಹರಿವು ಕಡಿಮೆಯಾದಂತೆ ನೀರಿನ ಬೇಡಿಕೆ ಹೆಚ್ಚಾಗುತ್ತಿದೆ. ಜಲಾಶಯದಿಂದ ಸರಬರಾಜಾಗುವ ಕುಡಿಯುವ ನೀರನ್ನು ನಂಬಿರುವ ಪಟ್ಟಣ ಮತ್ತು ನಗರ ಪ್ರದೇಶಗಳ ಬೇಡಿಕೆ ದಿನೇ ದಿನೆ ಹೆಚ್ಚಾಗುತ್ತಿದೆ. ಈ ವರ್ಷಗಳಲ್ಲಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ಸಕಾಲಕ್ಕೆ ನಾಲೆಗಳಲ್ಲಿ ನೀರು ಬರದೇ, ಬೆಳೆ ಬೆಳಲಾಗದೇ ಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯ ಸಕಲೇಶಪುರ, ಮೂಡಿಗೆರೆ ಭಾಗದಲ್ಲಿ ಸಕಾಲಕ್ಕೆ ಮಳೆಯಾದರೆ ಮಾತ್ರ ಜಲಾಶಯ ಭರ್ತಿಯಾಗಲು ಸಾಧ್ಯ.

ಇನ್ನು ಜಿಲ್ಲೆಯಲ್ಲಿ ಗುಟುಕು ನೀರಿಗೂ ಪ್ರಾಣಿ-ಪಕ್ಷಿಗಳು, ಜಾನುವಾರುಗಳು, ಜಲಚರಗಳು ಅಷ್ಟೇ ಅಲ್ಲದೇ ಜಿಲ್ಲೆಯ ಜನರು ಕೂಡ ಪರಿತಪಿಸುತ್ತಿದ್ದಾರೆ. ಅರಸೀಕೆರೆ, ಹಾಸನ, ಚನ್ನರಾಯಪಟ್ಟಣ ಸೇರಿದಂತೆ ಮಲೆನಾಡ ಪ್ರದೇಶವಾದ ಸಕಲೇಶಪುರದಲ್ಲಿಯೂ ಟ್ಯಾಂಕರ್​ ಮೂಲಕ ನೀರನ್ನ ಪೂರೈಸಲಾಗುತ್ತಿದೆ. ಕುಡಿಯುವ ನೀರಿಗಾಗಿ ಡೆಡ್ ಸ್ಟೋರೆಜ್ ನೀರನ್ನು ಬಳಸಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಸದ್ಯ ವರುಣ ಅಲ್ಪ ಮಳೆಯಾಗಿದ್ದರಿಂದ ಕುಡಿಯುವ ನೀರಿಗೆ ಕೊಂಚ ಮಟ್ಟಿಗೆ ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ ಎನ್ನುತ್ತಾರೆ ಶ್ರೀನಿವಾಸ್.

ಸಕಾಲಕ್ಕೆ ಮಳೆ ಬರದೇ ಸಮಸ್ಯೆ ಆದ್ರೆ ಈ ಎಲ್ಲಾ ಯೋಜನೆಗಳಗೂ ಸದ್ಯದ ನೀರಿನ ಲಭ್ಯತೆ ಆಧಾರಿಸಿ ಸಮ ಪ್ರಮಾಣದಲ್ಲಿ ಸರಾಸರಿ ಅಧಾರದಲ್ಲಿ ನೀರು ಹರಿಸುತ್ತಾರೆ. ನಾಲೆಗಳ ಮೂಲಕ ನೀರು ಹರಿಯುವಾಗ ಬಲಾಡ್ಯ ರೈತರಷ್ಟೇ ಅಲ್ಲದೇ ಸಾಮಾನ್ಯ ರೈತಾಪಿ ವರ್ಗದವರು ನಾಲೆಗಳಿಗೆ ಪಂಪ್​ ಸೆಟ್ ಹಾಕಿ ತಮಗೆ ಬೇಕಾದಷ್ಟು ನೀರು ಕದಿಯುತ್ತಾರೆ. ಇವರಲ್ಲಿ ರಾಜಕೀಯ ಪಕ್ಷಗಳ ಪುಡಾರಿಗಳೇ ಹೆಚ್ಚು ಎನ್ನಲಾಗುತ್ತಿದೆ.

ಅಣೆಕಟ್ಟೆಯಲ್ಲಿ ಈಗಿರುವ ನೀರಿನ ಪ್ರಮಾಣ 5.67ಟಿಎಂಸಿ. ಇದರಲ್ಲಿ ಬಳಕೆಗೆ ಸಿಗುವುದು ಕೇವಲ 3.5 ಟಿಎಂಸಿ ನೀರು ಮಾತ್ರ. ಈ ಜಲಾಶಯ ತುಂಬಿದ್ರೆ ಹಾಸನ, ಮಂಡ್ಯ, ತುಮಕೂರು, ಮೈಸೂರು ಜಿಲ್ಲೆಗಳ ಹಲವು ತಾಲೂಕುಗಳಿಗೆ ರೈತರು ಬೆಳೆದಿರುವ ಭತ್ತ, ಕಬ್ಬು, ಜೋಳ ಇತ್ಯಾದಿ ಬೆಳೆಗಳಿಗೆ ನೀರು ಕೊಡಬೇಕು. ಅಲ್ಲದೆ ನದಿ ಪಾತ್ರಕ್ಕೂ ನೀರು ಬಿಡಬೇಕು. ಇದರ ಜೊತೆಗೆ ಹಲವು ನಗರಗಳಿಗೆ ಕುಡಿಯುವ ನೀರು ಸಹ ಕೊಡಬೇಕು. ಹೇಮಾವತಿ ಜಲಾಶಯ ಪ್ರದೇಶದಲ್ಲಿ ಈ ಸಲ ಸಕಾಲಕ್ಕೆ ಮಳೆ ಪ್ರಾರಂಭವಾಗದೇ ಬರದ ಛಾಯೆ ಆವರಿಸಿದೆ. ಹೀಗಾಗಿ ಎಲ್ಲ ಜಿಲ್ಲೆಗಳಿಗೆ ಈ ಬಾರಿಯೂ ನೀರಿನ ಕೊರತೆ ಕಾಡಲಿದೆ ಎನ್ನುತ್ತಾರೆ ತಜ್ಞರು.

ನೀರಿನ ಒಳಹರಿವು ಬಹುತೇಕ ಕಡಿಮೆಯಾಗಿದ್ದು, ಕೇವಲ 300 ಕ್ಯೂಸೆಕ್ ಮಾತ್ರ ಬರುತ್ತಿದೆ. ಇನ್ನು ನದಿಗೆ 120 ಕ್ಯೂಸೆಕ್ ಬಿಡಲಾಗಿದ್ದು, ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡದ ಸ್ಥಿತಿ ನಿರ್ಮಾಣವಾಗಿದೆ. ಹಾಸನ ನಗರಕ್ಕೆ 3 ದಿನಗಳಿಗೊಮ್ಮೆ ಕುಡಿಯುವ ನೀರು ಬಿಡುವ ಪರಿಸ್ಥಿತಿ ಇದೆ. ಕೆಲವೇ ದಿನದಲ್ಲಿ ಅದು ಬಂದಾಗಬಹುದು ಎನ್ನುತ್ತಾರೆ ಸ್ಥಳೀಯರು.

ಜಲಾಶಯದ ನೀರಿನ ಮಟ್ಟ:

  • ಜಲಾಶಯದ ಒಟ್ಟು ನೀರಿನ ಮಟ್ಟ 37.103 ಟಿಎಂಸಿ.
  • ಇಂದು ಶೇಖರಣೆಯಾಗಿರುವ ನೀರಿನ ಸಂಗ್ರಹ 5.67 ಟಿಎಂಸಿ.
  • ಜಲಾಶಯ ನಂಬಿರುವ ರೈತರಿಗೆ ವಾರ್ಷಿಕವಾಗಿ ಬೇಕಾಗಿರುವ ನೀರಿನ ಪ್ರಮಾಣ 58 ಟಿಎಂಸಿ.
  • ನದಿ ಮೂಲಕ ಪ್ರತಿನಿತ್ಯ 150 ಕ್ಯೂಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ.

ಜಲಾಶಯದ ನೀರು ಉಪಯೋಗದ ವಿವರ ಇಂತಿದೆ.

  • ಕಾಲುವೆಗಳ ಮೂಲಕ ನೀರಾವರಿಗೆ 43.67 ಟಿಎಂಸಿ ನೀರು ಬೇಕಾಗುತ್ತೆ.
  • ಶ್ರೀರಾಮ ದೇವರ ಅಣೆಕಟ್ಟೆಗೆ 5 ಟಿಎಂಸಿ ನೀರು.
  • ಮಂದಗೆರೆ ಅಣೆಕಟ್ಟೆಗೆ 3.13 ಟಿಎಂಸಿ ನಿರು.
  • ಏತ ನೀರಾವರಿ ಯೋಜನೆಗಳಾದ ಅಡಿಕೆಬೊಮ್ಮನಹಳ್ಳಿ, ಕಾಮಸಮುದ್ರ, ಹುಚ್ಚನಕೊಪ್ಪಲು, ಹಳ್ಳಿಮೈಸೂರು, ಕಾಚೇನಹಳ್ಳಿ, ಬಾಗೂರು-ನವಿಲೆಗೆ 3 ಟಿಎಂಸಿ ನೀರು ಬೇಕಾಗುತ್ತೆ.

ಒಟ್ಟಾರೆ ಮಳೆ ಕೊರತೆಯಿಂದ ರೈತ ಕಂಗಾಲಾಗುವುದರ ಜೊತೆಗೆ ಚಿಂತಾಕ್ರಾಂತನಾಗಿರುವು ಸತ್ಯ. ಸದ್ಯ ಅಲ್ಪಾವಧಿ ಸಾಲಮನ್ನಾ ಮಾಡಿರುವ ಸರ್ಕಾರದಿಂದ ಜನ ಕೊಂಚ ನಿರಾಳರಾಗಿದ್ದು, ನಿಜವಾದ್ರೂ ಸಾಲ ಮನ್ನಾವೇ ಎಲ್ಲದ್ದಕ್ಕೂ ಪರಿಹಾರವಲ್ಲ. ವರುಣನ ಕೃಪೆಯಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯ.

Last Updated : May 3, 2019, 1:46 PM IST

ABOUT THE AUTHOR

...view details