ಹಾಸನ: ಸಮಾಜದಲ್ಲಿ ನಡೆಯುತ್ತಿರುವ ಮತಾಂತರ ಹಾವಳಿ ದೂರ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಮತಾಂತರ ಎಂಬುದು ಮನೆ-ಮನೆಗಳಲ್ಲಿ ಅವಾಂತರ ಎಬ್ಬಿಸುತ್ತಿತ್ತು. ಅನೇಕ ಮನೆಗಳಲ್ಲಿ ಗಂಡ ಹೆಂಡತಿಯರನ್ನು ಬೇರ್ಪಡಿಸುವಂತಹ ಕೆಟ್ಟ ಕಾರ್ಯವಾಗುತ್ತಿತ್ತು. ಇಂತಹ ಹಾವಳಿಯನ್ನು ದೂರ ಮಾಡುವುದಕ್ಕೆ ಕಾಯ್ದೆ ತರಲಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಪಠ್ಯಪುಸ್ತಕಗಳಲ್ಲಿ ಹೊಸ ವಿಷಯಗಳ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಲಕಾಲಕ್ಕೆ ಹೊಸ ವಿಚಾರಗಳನ್ನು ಸೇರ್ಪಡೆಗೊಳಿಸುವಂಥದ್ದು ತಪ್ಪಲ್ಲ. ಭಗತ್ ಸಿಂಗ್ ವಿಚಾರವನ್ನು ತೆಗೆದುಹಾಕಿಲ್ಲ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಸುಮ್ಮನೆ ಸಮಾಜದಲ್ಲಿ ಗುಲ್ಲೆಬ್ಬಿಸುವ ಕೆಲಸ ಒಳ್ಳೆಯದಲ್ಲ ಎಂದರು.