ಹಾಸನ: ದಿನದಿಂದ ದಿನಕ್ಕೆ ಹಾಸನದಲ್ಲಿ ಕೋವಿಡ್ ಸೋಂಕಿತರ ಮತ್ತು ಕೊರೊನಾದಿಂದ ಮೃತಪಟ್ಟವರ ಸಾವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಕ್ರಮ ಕೈಗೊಂಡಿದೆ.
ನಿನ್ನೆ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ವಾರದಲ್ಲಿ 4 ದಿನ ಲಾಕ್ಡೌನ್ ಮಾಡುವ ನಿರ್ಧಾರವನ್ನು ಕೈಗೊಂಡ ಬೆನ್ನಲ್ಲೇ ಇಂದು ತರಕಾರಿ ವ್ಯಾಪಾರಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಾರದಲ್ಲಿ ದಿನ ಬಿಟ್ಟು ದಿನ ವ್ಯಾಪಾರಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.
ಹಾಸನದಲ್ಲಿ ದಿನೇ ದಿನೆ ಕೊರೊನಾ ಪ್ರಕರಣಗಳು ಹೆಚ್ಚಾಗ್ತಿವೆ. ಹೀಗಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ವಾರದಲ್ಲಿ ಮೂರು ದಿನ ಬೆಳಗ್ಗೆ 6ರಿಂದ 10ರ ತನಕ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಿದ್ದು, ಇನ್ನುಳಿದ ನಾಲ್ಕು ದಿನ ಸಂಪೂರ್ಣ ಲಾಕ್ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ರು. ಆದ್ರೆ ಇದು ಮಾರುಕಟ್ಟೆ ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಸರ್ಕಾರದ ವಿರುದ್ಧ ವ್ಯಾಪಾರಿಗಳ ಆಕ್ರೋಶ ವಾರದಲ್ಲಿ ನಾಲ್ಕು ದಿನ ಬಂದ್ ಮಾಡಿದ್ರೆ ನಾವು ಬದುಕುವುದಾದ್ರು ಹೇಗೆ..?
ತರಕಾರಿಗೆ ಬಂಡವಾಳ ಹಾಕಿ ಕೇವಲ 2-3 ಗಂಟೆಯಲ್ಲಿ ಮಾರಲು ಸಾಧ್ಯವಾಗದೇ, ಇಲ್ಲಿಯೇ ಬಿಸಾಡಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ನಮ್ಮ ಬದುಕು ಮೂರಾಬಟ್ಟೆಯಾಗುತ್ತಿದೆ. ಹಾಗಾಗಿ ಸಂಪೂರ್ಣ ಲಾಕ್ಡೌನ್ ಮಾಡಿ ವಾರದಲ್ಲಿ ಒಂದು ದಿನ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ. ಅಥವಾ ದಿನ ಬಿಟ್ಟು ದಿನ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:58ಕ್ಕೂ ಅಧಿಕ ಬಾರಿ ಕಾಂಗ್ರೆಸ್ನವರು ಲಸಿಕೆ ವಿರುದ್ಧ ಹೇಳಿಕೆ ನೀಡಿದ್ದಾರೆ: ಪ್ರಹ್ಲಾದ್ ಜೋಶಿ
ಇನ್ನು ಇದೊಂದು ಅವೈಜ್ಞಾನಿಕವಾದ ನಿರ್ಧಾರ. ವಾರದಲ್ಲಿ ಕೇವಲ ಮೂರು ದಿನ ಮಾತ್ರ ಬೆಳಗ್ಗೆ 6ರಿಂದ 10ರ ತನಕ ವ್ಯಾಪಾರ ಮಾಡುವುದು ತುಂಬಾ ಕಷ್ಟ. ನಾವು ಹಳ್ಳಿಗಳಿಂದ ಬರಬೇಕಾದ್ರೆ ಯಾವುದೇ ವಾಹನದ ವ್ಯವಸ್ಥೆಯಿಲ್ಲ. ಹೆಚ್ಚಿನ ಹಣ ಕೊಟ್ಟು ವಾಹನದಿಂದ ತರಕಾರಿ ತರುವುದರೊಳಗೆ ಬೆಳಗ್ಗೆ 7 ಗಂಟೆಯಾಗುತ್ತದೆ. ಇದ್ರ ನಡುವೆ 9.30ಕ್ಕೆ ಪೊಲೀಸ್ರು ವ್ಯಾಪಾರವನ್ನು ಬಂದ್ ಮಾಡುವಂತೆ ಮೇಲಿಂದ ಮೇಲೆ ಒತ್ತಡ ಹಾಕುತ್ತಾರೆ. ಪ್ರತಿದಿನ ನಾವು 4-5 ಸಾವಿರ ಬಂಡವಾಳ ಹಾಕುತ್ತಿದ್ದು, ಕೇವಲ 1 ಸಾವಿರದಷ್ಟು ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೊದಲಿದ್ದ ಪ್ರಕಾರವೇ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರೆ ಉತ್ತಮ. ಕಾರಣ ದಿನ ಬಿಟ್ಟು ದಿನ ತರಕಾರಿಯು ಕೊಳೆಯುವ ಸ್ಥಿತಿಗೆ ಬರುತ್ತದೆ. ಲಾಭವಿಲ್ಲದೇ ನಷ್ಟವೇ ಹೆಚ್ಚಾಗುತ್ತದೆ ಅಂತಾರೆ ವ್ಯಾಪಾರಿಗಳು.
ಇದನ್ನೂ ಓದಿ:ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್ಓ ಹೊಸ ನೀತಿಯ ಪೂರ್ಣ ಮಾಹಿತಿ