ಹಾಸನ: ಜಿಲ್ಲೆಯ ಆಲೂರು ತಾಲೂಕಿನಲ್ಲಿರುವ ವಾಟೆ ಹೊಳೆ ಜಲಾಶಯದಿಂದ ಇಂದು 3020 ಕ್ಯೂಸೆಕ್ ನೀರನ್ನು ಕ್ರಸ್ಟ್ ಗೇಟ್ಗಳ ಮೂಲಕ ಹೊರ ಬಿಡಲಾಗುತ್ತಿದೆ. ಇನ್ನು ನದಿ ಪಾತ್ರದಲ್ಲಿ ವಾಸಿಸುವ ಕುಟುಂಬಗಳು ತಮ್ಮ ಜಾನುವಾರುಗಳನ್ನು ಹಾಗೂ ತಮ್ಮ ದಿನನಿತ್ಯದ ಗೃಹಪಯೋಗಿ ಸಾಮಗ್ರಿಗಳನ್ನು ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಹಶಿಲ್ದಾರ್ ಶಿರಿನ್ ತಾಜ್ ಸೂಚನೆ ನೀಡಿದ್ದಾರೆ.
ವಾಟೆಹೊಳೆ ಜಲಾಶಯ ಭರ್ತಿ;ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸ್ಥಳೀಯರಿಗೆ ಸೂಚಿಸಿದ ತಹಶೀಲ್ದಾರ್ ಚಿಕ್ಕಮಗಳೂರು ಮತ್ತು ಬಿಕ್ಕೋಡು ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರತಿನಿತ್ಯ ಜಲಾಶಯಕ್ಕೆ 4520 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 3020 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇನ್ನು ಜಲಾಶಯದ ಗರಿಷ್ಠ ಮಟ್ಟ 1.51 ಟಿಎಂಸಿ ಇದ್ದು, ಇಂದು 1.385 ಟಿಎಂಸಿ ನೀರು ಶೇಖರಣೆಯಾದ ಪರಿಣಾಮ ನೀರನ್ನ ಹೊರ ಬಿಡಲಾಗುತ್ತಿದೆ.
2012 ರಲ್ಲಿ ಈ ಜಲಾಶಯ ಭರ್ತಿಯಾಗಿತ್ತು. ಬೇಲೂರು ತಾಲೂಕು ಬಿಕ್ಕೋಡು ಹೋಬಳಿಯಲ್ಲಿ ಮಳೆಯಾಗುತ್ತಿರುವುದರಿಂದ ಒಳಹರಿವು ಪ್ರಮಾಣ ಹೆಚ್ಚಾಗಿದ್ದು, 8 ದಿನಗಳ ಹಿಂದೆ ಜಲಾಶಯದಲ್ಲಿ ಕೇವಲ 0.69 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು.
ಸುಮಾರು ಏಳು ವರ್ಷಗಳ ನಂತರ ಜಲಾಶಯ ಭರ್ತಿಯಾಗಿ ನೀರನ್ನ ಹೊರ ಬಿಟ್ಟಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ವಾಟೆಹೊಳೆ ನದಿ ಪಾತ್ರದ ಎಡದಂಡೆ ನಾಲೆ ಬೇಲೂರು ತಾಲೂಕಿಗೆ ಒಳಪಡುವುದರಿಂದ ಸುಮಾರು 250 ಹೆಕ್ಟೇರ್ ಮತ್ತು ಬಲದಂಡೆ ನಾಲೆ ಆಲೂರು ತಾಲೂಕಿಗೆ ಸೇರುವುದರಿಂದ ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರನ್ನ ಒದಗಿಸುತ್ತದೆ.
ಒಟ್ಟಾರೆ ಹೇಮಾವತಿ ಜಲಾಶಯ ತುಂಬುವ ಮುನ್ನವೇ ಆಲೂರು ತಾಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾಗಿದ್ದು, 3 ಕ್ರಸ್ಟ್ ಗೇಟ್ಗಳಿಂದ ನೀರನ್ನು ಹೊರ ಬಿಟ್ಟಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಕೂಡ ದ್ವಿಗುಣವಾಗಿತ್ತು.