ಹಾಸನ: ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದ್ರೂ ನಮ್ಮನ್ನು ಏನು ಮಾಡಕ್ಕಾಗಲ್ಲ. ನಾವು ರಾಜ್ಯ ಬಂದ್ ಮಾಡೇ ಮಾಡುತ್ತೇವೆ ಎಂದು ಕನ್ನಡ ಪರ ಸಂಘಟನೆಗಳ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿಸೆಂಬರ್ 5ಕ್ಕೆ ಇಡೀ ಕರ್ನಾಟಕ ಬಂದ್ ಆಗಲಿದೆ. ಇದನ್ನು ತಡೆಯುವಂತಹ ಶಕ್ತಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಇಲ್ಲ. ಶನಿವಾರ ನಡೆಯುವ ಹೋರಾಟ ನಮಗೂ ಮತ್ತು ಯಡಿಯೂರಪ್ಪನವರಿಗೂ ನಡೆಯುವ ಫೈಟ್. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಕೂಡ ಮೌನವಹಿಸಿದ್ದಾರೆ.
ಇನ್ನು ಯಡಿಯೂರಪ್ಪ ಕರ್ನಾಟಕ ಬಂದ್ ವಾಪಸ್ ಪಡೆಯಲು ಆದೇಶ ಮಾಡುತ್ತಾರೆ. ಬಂದ್ ಹಿಂಪಡೆಯುವ ಆದೇಶ ಮಾಡಲು ಇವರು ಯಾರು?, ಉತ್ತರ ಕರ್ನಾಟಕವನ್ನು ಇಬ್ಭಾಗ ಮಾಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದು ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಮರಾಠ ಪ್ರಾಧಿಕಾರ ಮಾಡುವ ಅಗತ್ಯವೇನಿತ್ತು? ಎಂದು ವಾಟಾಳ್ ಪ್ರಶ್ನಿಸಿದರು.
ಇವತ್ತು ಮರಾಠಿಗರ ಪ್ರಾಧಿಕಾರ ಮಾಡಿದ್ದೀರಿ. ನಾಳೆ ತಮಿಳರು, ಗುಜರಾತಿಗರು, ಕೇರಳಿಗರು, ತೆಲುಗರು ನಮಗೂ ಪ್ರಾಧಿಕಾರ ಬೇಕು ಎಂದು ಒತ್ತಡ ಹೇರುತ್ತಾರೆ. ಹೀಗೆ ಎಲ್ಲಾ ಜನಾಂಗಕ್ಕೆ ಒಂದೊಂದು ಪ್ರಾಧಿಕಾರ ಎಂದು ರಚನೆ ಮಾಡುತ್ತಾ ಹೋದರೆ ವಿಧಾನಸೌಧಕ್ಕೆ ಇನ್ನೆರಡು ವಿಕಾಸಸೌಧ ನಿರ್ಮಾಣ ಮಾಡಿದರೂ ಸಾಕಾಗುವುದಿಲ್ಲ. ಹಾಗಾಗಿ ಕೂಡಲೇ ನೀವು ಪ್ರಾಧಿಕಾರ ರಚನೆಯ ಆದೇಶ ಹಿಂಪಡೆಯಿರಿ. ಹಿಂಪಡೆಯದಿದ್ದರೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ನಾವು ಸಿದ್ಧರಿದ್ದೇವೆ ವಾಟಾಳ್ ನಾಗರಾಜ್ ಎಚ್ಚರಿಸಿದರು.