ಅರಕಲಗೂಡು :ಕಠಿಣ ಪರಿಶ್ರಮ ಮತ್ತು ಪ್ರಯತ್ನದಿಂದ ಪ್ರಪಂಚದ ಶ್ರೇಷ್ಠ ವ್ಯಕ್ತಿಯಾಗಿ ರೂಪಿತಗೊಳ್ಳುತ್ತಾರೆ ಅನ್ನೋದಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿಯೇ ನಿದರ್ಶನ ಎಂದು ಶಾಸಕ ಎ.ಟಿ ರಾಮಸ್ವಾಮಿ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಡಿನಲ್ಲಿ ವಾಸಿಸುತ್ತಿದ್ದು ರತ್ನಾಕರ ನಾರದ ಮಹಾಋಷಿಗಳ ಮಾರ್ಗದರ್ಶನದಿಂದ ಮನಸ್ಸನ್ನು ಪರಿವರ್ತಿಸಿಗೊಂಡು ಆದಿಕವಿ ಮಹರ್ಷಿ ವಾಲ್ಮೀಕಿ ಆದರು. ಉಗ್ರ ತಪಸ್ಸಿನೊಂದಿಗೆ 24 ಸಾವಿರ ಸಂಸ್ಕೃತ ಶ್ಲೋಕ, ಕಾವ್ಯ, ಗ್ರಂಥಗಳನ್ನು ರಚಿಸಿ ವಿಶ್ವದ ಆದಿಕವಿ ಎನಿಸಿಕೊಂಡರು ಎಂದು ಅವರ ನಡೆದುಬಂದು ಸಾಧನಾ ಹಾದಿಯನ್ನು ವಿವರಿಸಿದರು.
ಓರ್ವ ಸಾಮಾನ್ಯ ವ್ಯಕ್ತಿ ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಪಟ್ಟರೆ ಪ್ರಪಂಚದ ಶ್ರೇಷ್ಠ ವ್ಯಕ್ತಿಯಾಗಿ ರೂಪಿತಗೊಳ್ಳುತ್ತಾರೆ ಅನ್ನೋದಕ್ಕೆ ಮಹರ್ಷಿ ವಾಲ್ಮೀಕಿಯೇ ಸಾಕ್ಷಿ. ವಿಶ್ವ ಮಾನವ ಎನಿಸಿಕೊಂಡು ಇಂದಿನ ಸಮಾಜಕ್ಕೆ ಸಾಕಷ್ಟು ಕೊಡುಗೆಯಾಗಿ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ನಾವು ಎಲ್ಲರೂ ಅರಿತುಕೊಳ್ಳಬೇಕು ಎಂದರು.
ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ತಾಲೂಕು ದಂಡಾಧಿಕಾರಿ ವೈ.ಎಂ. ರೇಣುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವನಂಜೇಗೌಡ, ಪ.ಪಂ ಮುಖ್ಯಾಧಿಕಾರಿ ಬಸವರಾಜು, ತಾ.ಪಂ ಸಾಮಾನ್ಯ ಸ್ಥಾಯಿಸಮಿತಿ ಅಧ್ಯಕ್ಷ ವೀರಾಜು, ಜಿ.ಪಂ ಸದಸ್ಯ ರೇವಣ್ಣ, ತಾ.ಪಂ ಸದಸ್ಯೆ ದೀಪಿಕಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಹಾಜರಿದ್ದರು.