ಹಾಸನ:ಸೋಂಕು ತಗುಲಿದ ವ್ಯಕ್ತಿಗಳನ್ನು ತಕ್ಷಣ ಕೋವಿಡ್ ಕೇರ್ ಸೆಂಟರ್ಗೆ ಸೇರಿಸಲೇಬೇಕು. ಜೊತೆಗೆ ಸ್ಥಳದಲ್ಲಿಯೇ ಕೊರೊನಾ ಪರೀಕ್ಷೆ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಸೋಂಕಿತರನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಕಲಾ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದ್ಯರ ನಡೆ ಗ್ರಾಮೀಣ ಭಾಗದ ಕಡೆ ಎಂಬ ಯೋಜನೆಗೆ ಚಾಲನೆ ನೀಡಿ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಮ್ಮ ಹಾಸನ ಜಿಲ್ಲೆಯಲ್ಲಿ ಯಾವುದೇ ರೀತಿಯ ಆಮ್ಲಜನಕದ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. ಮುಖ್ಯಮಂತ್ರಿಗಳ ಆಶಯದಂತೆ ಇವತ್ತು ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಗಾಗಿ ವೈದ್ಯರ ನಡೆ ಗ್ರಾಮೀಣ ಭಾಗದ ಕಡೆ ಯೋಜನೆಗೆ ಚಾಲನೆ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಯಲ್ಲಿಯೂ ಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಸೋಂಕಿತರಿಗೆ ಸ್ಥಳದಲ್ಲಿಯೇ ಕೆಲವು ಚಿಕಿತ್ಸೆಗಳನ್ನು ನೀಡುವಂತಹ ಕಾರ್ಯ ಮಾಡುವ ಜೊತೆಗೆ 47 ವಾಹನಗಳ ಮೂಲಕ 150ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶಂಕಿತರ ಪತ್ತೆ ಹಚ್ಚಲಾಗುವುದು. ಇಂದಿನಿಂದ ಮತ್ತಷ್ಟು ವಾಹನಗಳನ್ನು ಗ್ರಾಮೀಣ ಭಾಗದೆಡೆಗೆ ಕಳುಹಿಸಲಾಗುವುದು ಎಂದರು.
ಇನ್ನು ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯನ್ನು ಈಗಾಗಲೇ ಸರಿಪಡಿಸಲಾಗಿದೆ. ಜಿಲ್ಲೆಗೆ 10 ಕೋಟಿ ಹಣ ಬಿಡುಗಡೆಯಾಗಿದ್ದು, 40 ವೆಂಟಿಲೇಟರ್ ಕೊಡಲಾಗಿದೆ. ಹಿಮ್ಸ್ನಲ್ಲಿ ಮತ್ತೊಂದು ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಕಾರ್ಯ ಈಗಾಗಲೇ ಆರಂಭವಾಗಿದೆ. ಕೇಂದ್ರ ಸರ್ಕಾರದಿಂದ ಚನ್ನರಾಯಪಟ್ಟಣ ಮತ್ತು ಸಕಲೇಶಪುರಕ್ಕೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದೆ. ಉಳಿದಂತೆ ಎಲ್ಲಾ ತಾಲೂಕಿನಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.