ಕರ್ನಾಟಕ

karnataka

ETV Bharat / state

ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಬರೀ ಯಂತ್ರಗಳದ್ದೇ ಕಾರುಬಾರಂತೆ! - undefined

ಕಾರ್ಮಿಕರಿಗೆ ಉದ್ಯೋಗದ ಭರವಸೆ ನೀಡಬೇಕಾದ ಉದ್ಯೋಗ ಖಾತ್ರಿ ಕಾಮಗಾರಿಗೆ ಕಾರ್ಮಿಕರ ಬದಲಿಗೆ ಯಂತ್ರಗಳ ಬಳಕೆಗೆ ಜನರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಜನತೆಯಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಯೋಜನೆಯಡಿ ನಡೆಯುತ್ತಿರುವ ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕಾರ್ಮಿಕರು ಆಗ್ರಹಿಸಿದ್ದಾರೆ.

ಕೆಲಸ ಮಾಡೋದೆಲ್ಲಾ ಬರೀ ಯಂತ್ರೋಪಕರಣಗಳು

By

Published : Jun 21, 2019, 8:12 AM IST

ಹಾಸನ:ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾರ್ಮಿಕರ ಬದಲಿಗೆ ಯಂತ್ರೋಪಕರಣ ಬಳಸುತ್ತಿರುವುದಕ್ಕೆ ಜಿಲ್ಲೆಯಲ್ಲಿ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ. ಹೀಗಿದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಿಡಿಒ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಯಂತ್ರಗಳ ಮೂಲಕವೇ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಆಲೂರು ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿದೆ. ಈ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಉದ್ಯೋಗದ ಕಾರ್ಡ್​ ಪಡೆದಿರುವ ಕೂಲಿ ಕಾರ್ಮಿಕರಿಗೆ ನೀಡುವ ಉದ್ಯೋಗದ ದಿನಗಳ ಸಂಖ್ಯೆಯನ್ನು 100ರಿಂದ 150ಕ್ಕೆ ಹೆಚ್ಚಿಸಲಾಗಿದೆ. ಬರ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಹಿತದೃಷ್ಟಿಯಿಂದ ಉದ್ಯೋಗ ದಿನಗಳನ್ನು ಹೆಚ್ಚಿಸಲಾಗಿದೆ. ಆದಾಗಿಯೂ ಸಹ ಆಲೂರು ತಾಲೂಕು ಭೈರಾಪುರ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಅನಿವಾರ್ಯತೆ ಇಲ್ಲದಿದ್ದರೂ ಕೆರೆ ಹೂಳು ತೆಗೆಯುವುದು, ರಸ್ತೆ, ಚರಂಡಿ ಸೇರಿದಂತೆ ಇತರ ಕಾಮಗಾರಿಗಳಿಗೆ ಯಂತ್ರೋಪಕರಣಗಳನ್ನು ಬಳಸಲಾಗಿದೆ. ಇದರಿಂದ ಕೂಲಿ ಕಾರ್ಮಿಕರು ಉದ್ಯೋಗ ವಂಚಿತರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಕೆಲಸ ಮಾಡೋದೆಲ್ಲಾ ಬರೀ ಯಂತ್ರೋಪಕರಣಗಳು!

ಮಣ್ಣನ್ನು ತೆಗೆದು ಟ್ರ್ಯಾಕ್ಟರ್‌ಗೆ ತುಂಬಲು ಕಾರ್ಮಿಕರನ್ನೇ ಬಳಸಬೇಕು. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲೂ ರಾಶಿ ಬಿದ್ದ ಮಣ್ಣನ್ನು ಹರಡಿ ಸಮತಟ್ಟುಗೊಳಿಸಲೂ ಸಹ ಕಾರ್ಮಿಕರನ್ನು ಬಳಸಬೇಕು. ಆದರೆ ಗ್ರಾಮದಲ್ಲಿ ನಡೆಸಲಾಗಿರುವ 2019-2020ನೇ ಸಾಲಿಗೆ ಮಂಜೂರಾಗಿರುವ ಭೈರಾಪುರ ಗ್ರಾಮದ ಸೀಗೆ ಕಟ್ಟೆ, ಸೊಪ್ಪಿನಹಳ್ಳಿ ಗ್ರಾಮದ ದೇವರಕಟ್ಟೆ, ಬಾಚನಹಳ್ಳಿ ಗ್ರಾಮದ ಸ್ಮಶಾನ ಕಟ್ಟೆ ಹಾಗೂ ಬ್ಯಾಬಕಾವಲು ಗ್ರಾಮದ ಗೋವಿನಕಟ್ಟೆಯಲ್ಲಿ ಹೂಳು ತೆಗೆಯುವ ಕಾಮಗಾರಿಯನ್ನು ಹಿಟಾಚಿ, ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ಮಾಡಲಾಗುತ್ತಿದೆ. ಆ ಗ್ರಾಮದ ಪಂಚಾಯಿತಿ ಸದಸ್ಯರೇ ಅಧಿಕಾರಿಗಳೊಂದಿಗೆ ಶಾಮೀಲಾಗಿ ಕಳಪೆ ಕಾಮಗಾರಿ ನಿರ್ವಹಿಸಿ, ಕೂಲಿ ಕಾರ್ಮಿಕರಿಗೆ ದೋಖಾ ಮಾಡಿರುತ್ತಾರೆ. ಕಾಮಗಾರಿಗೆ ಉಪಯೋಗಿಸಿರುವ ಯಂತ್ರಗಳ ಫೋಟೋ ಮತ್ತು ವಿಡಿಯೋ ಜತೆ ದೂರು ನೀಡಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾರ್ಮಿಕರು ದೂರುತ್ತಾರೆ.

ಇನ್ನು ಬೈರಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಿಡಿಒ ಸೇರಿದಂತೆ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details