ಹಾಸನ: ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹಾಸನದ ಹೊರವಲಯದ ಹನುಮಂತಪುರ ಬಡಾವಣೆಯಲ್ಲಿ ನಡೆದಿದೆ. ಯುಪಿಯ ನಯನ್‌ಪುರ ಗ್ರಾಮದ ರಾಮ್ ಸಂಜೀವನ್ (30) ಹಾಗೂ ನವಾಬ್ (24) ಮೃತ ದುರ್ದೈವಿಗಳು.
ಇವರು ಉತ್ತರ ಪ್ರದೇಶದಿಂದ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಹಾಸನಕ್ಕೆ ಬಂದಿದ್ದರು. ಜಿಲ್ಲೆಯ ಹೊರವಲಯದ ಬಟ್ಟೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ನಿನ್ನೆ(ಶುಕ್ರವಾರ) ಈ ಇಬ್ಬರು ಯುವಕರು ರಾತ್ರಿ ಮಲಗಿದ್ದಲ್ಲಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಒಂದು ವಾರದ ಹಿಂದೆ ಹಾಸನಕ್ಕೆ ಬಂದಿದ್ದ ರಾಮ್ ಸಂಜೀವನ್ ಹಾಗೂ ನವಾಬ್ ಬಾಡಿಗೆ ರೂಂ ಪಡೆದು ಖಾಸಗಿ ಬಟ್ಟೆ ಕಂಪನಿಯಲ್ಲಿ ಎರಡು ದಿನ ಕೆಲಸ ಮಾಡಿದ್ದರು. ಬಳಿಕ ಇಬ್ಬರಿಗೂ ವಿಪರೀತ ಜ್ವರ ಹಾಗೂ ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಜ್ವರ ಬಂದ ಕಾರಣ ಇಬ್ಬರೂ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಔಷಧಿಯನ್ನು ಸೇವಿಸಿ ಮಲಗಿದ್ದರು ಎನ್ನಲಾಗಿದೆ.
ಮುಂಜಾನೆ ಎಂದಿನಂತೆ ಇಬ್ಬರು ಹುಡುಗರು ರೂಮಿನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಮಾಲೀಕರು ಮನೆಯ ಬಾಗಿಲಿನ ಬೀಗ ಒಡೆದು ನೋಡಿದಾಗ ಇಬ್ಬರು ಯುವಕರು ಮಲಗಿದ್ದ ವೇಳೆಗೆ ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಮನೆ ಮಾಲೀಕ ಹಾಸನ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಯುವಕರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.