ಹಾಸನ: ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನದಲ್ಲಿ ಮೂವರು ದ್ವಿಚಕ್ರ ವಾಹನ ಕಳ್ಳರ ಬಂಧನ.. ಹಾಸನ ಮೂಲದ ಮೋಹನಕುಮಾರ್(25), ಮಹೇಶ (23), ಮಂಜುನಾಥ (27) ಬಂಧಿತರು. ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಹಾಸನ ಪೊಲೀಸರು ಮೋಟಾರ್ ವಾಹನ ಕಾಯ್ದೆ ಅಡಿ ಬೇಲೂರು ರಸ್ತೆಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ವೇಳೆ ಕುಪ್ಪಟ್ಟಿ ಗೇಟ್ ಬಳಿ ಬೇಲೂರು ಕಡೆಯಿಂದ ದ್ವಿಚಕ್ರ ವಾಹನ ಸವಾರರನ್ನು ತಪಾಸಣೆಗೊಳಪಡಿಸಿದ್ದಾರೆ. ಆಗ ದಾಖಲಾತಿ ಇಲ್ಲದೆ ಓರ್ವ ಬೈಕ್ ಚಾಲನೆ ಮಾಡುತ್ತಿದ್ದು, ಬಳಿಕ ಆತನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ನಂತರ ಆತನನ್ನು ವಶಕ್ಕೆ ಪಡೆದು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಚಿಕ್ಕಮಗಳೂರು, ಹಾಸನ ಜಿಲ್ಲೆಯ ಗೊರೂರು, ಬೇಲೂರು ಗ್ರಾಮಾಂತರ, ಆಲೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ಗಳನ್ನು ಕದ್ದು ಇತರರಿಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಕದ್ದ ಬೈಕ್ನ್ನು ಬೆಳಗ್ಗೆ ನಂಬರ್ ಪ್ಲೇಟ್ ಬದಲಿಸಿ ತಾವು ಕೂಡ ಈ ಖದೀಮರು ಓಡಿಸುತ್ತಿದ್ದರು ಎಂಬ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಬಂಧಿತರಿಂದ 1.5 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.