ಹಾಸನ: ಹಣಕ್ಕಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಇಬ್ಬರು ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಬರುವ ಕರಡಿಗಾಲ ಗ್ರಾಮದ ತಾಯವ್ವ (60) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಹಾಲು ಮಾರಿ ಜೀವನ ನಡೆಸುತ್ತಿದ್ದ ತಾಯವ್ವ ಮಾ.16ರಂದು ತೋಟದಲ್ಲಿ ಮೃತಪಟ್ಟಿರುವುದು ಪತ್ತೆಯಾಗಿತ್ತು. ಬಳಿಕ ಅನುಮಾನ ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಇದು ಸಹಜ ಸಾವಲ್ಲ ಅನ್ನೋದು ಖಾತ್ರಿಯಾಗಿದೆ.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದರು. ಈ ವೇಳೆ ತಾಯವ್ವನ ಇಬ್ಬರು ಪುತ್ರರಾದ ರಾಜೇಗೌಡ ಮತ್ತು ಸುಬ್ರಹ್ಮಣ್ಯರನ್ನು ವಿಚಾರಣೆಗೆ ಒಳಪಡಿಸಿದ್ದು, ಹಣಕ್ಕಾಗಿ ತಾಯಿಯನ್ನು ಹತ್ಯೆ ಮಾಡಿರುವುದಾಗಿ ಗೊತ್ತಾಗಿದೆ.
ಹಣದಾಸೆಗಾಗಿ ಹೆತ್ತಮ್ಮನ ಉಸಿರು ನಿಲ್ಲಿಸಿದ ಪಾಪಿ ಮಕ್ಕಳು ವ್ಯವಸಾಯ ಮತ್ತು ಜಾನುವಾರು ಹಾಲು ಮಾರಿಕೊಂಡು ಅದರಿಂದ ಬಂದ ಒಂದಿಷ್ಟು ಹಣವನ್ನು ತಾಯವ್ವ ಕೂಡಿಟ್ಟಿದ್ದರು. ಹಣ ಇಟ್ಟುಕೊಂಡಿದ್ದನ್ನು ಗಮನಿಸಿದ ಈಕೆಯ ಮಕ್ಕಳಾದ ಸುಬ್ರಮಣ್ಯ ಹಾಗೂ ರಾಜೇಗೌಡ ಆ ಹಣವನ್ನು ನೀಡುವಂತೆ ಆಗಿಂದಾಗ್ಗೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಆದ್ರೆ ಮಕ್ಕಳು ಹಣ ಸಿಕ್ಕರೆ ಹಾಳು ಮಾಡಿಬಿಡಬಹುದು ಎಂಬ ಭಯದಿಂದ ಆಕೆ ಸಂಬಂಧಿಕರೊಬ್ಬರ ಹತ್ತಿರ ಇರಿಸಿಕೊಂಡಿದ್ದರಂತೆ. ಇದರಿಂದ ಕುಪಿತರಾದ ಮಕ್ಕಳು ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯವ್ವಳೊಂದಿಗೆ ಜಗಳ ತೆಗೆದಿದ್ದಾರೆ. ಇದು ವಿಕೋಪಕ್ಕೆ ಹೋಗಿ ತಾಯಿಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮನೆಗೆ ಬಂದ ಸುಬ್ರಮಣ್ಯ ಹಾಗೂ ರಾಜೇ ಗೌಡ ಸಂಜೆಯಾದರೂ ತಾಯಿ ಬಂದಿಲ್ಲ ಎಂದು ಹುಡುಕಾಟ ನಡೆಸುವ ನಾಟಕವಾಡಿ, ನಂತರ ತೋಟದ ಬಳಿ ಸತ್ತು ಹೋಗಿದ್ದಾಳೆ ಎಂದು ಎಲ್ಲರಿಗೂ ಹೇಳಿ ಮೃತದೇಹವನ್ನು ಮನೆಗೆ ತಂದಿದ್ದಾರೆ.
ಬೆಂಗಳೂರಿನಲ್ಲಿದ್ದ ಸಹೋದರ ಹೇಮಂತನಿಗೂ ವಿಷಯ ತಿಳಿಸಿ ಕರೆಸಿಕೊಂಡಿದ್ದಾರೆ. ಮನೆಗೆ ಬಂದು ತಾಯಿ ಮೃತದೇಹ ನೋಡಿ ಅನುಮಾನ ವ್ಯಕ್ತಪಡಿಸಿದ ಹೇಮಂತ್‌ಗೆ, ಸಹೋದರರ ಮೇಲೆ ಅನುಮಾನ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಇದು ಸಹಜ ಸಾವಲ್ಲವೆಂದು ಗ್ರಹಿಸಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಿದ್ದಾರೆ.
ಮೇಲ್ನೋಟಕ್ಕೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಅನುಮಾನದ ಮೇಲೆ ಇಬ್ಬರು ಪುತ್ರರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾಯಿಯ ಬಳಿಯಿದ್ದ 50 ಸಾವಿರ ನಗದು ಮತ್ತು ಅಲ್ಪಸ್ವಲ್ಪ ಚಿನ್ನಕ್ಕಾಗಿ ಕೊಲೆ ಮಾಡಿಬಿಟ್ಟೆವು ಎಂದು ಮಕ್ಕಳೇ ಒಪ್ಪಿಕೊಂಡಿದ್ದರಿಂದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇದೀಗ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.