ಹಾಸನ:ಮರಳು ತುಂಬುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಸಮೀಪದ ಸಂತೇಶಿವರ ಕೆರೆಯಲ್ಲಿ ನಡೆದಿದೆ.
ಹಾಸನ: ಮರಳು ತುಂಬುವ ವೇಳೆ ಮಣ್ಣು ಕುಸಿದು ಇಬ್ಬರ ದುರ್ಮರಣ
ರಾತ್ರಿ ವೇಳೆ ಟ್ರ್ಯಾಕ್ಟರ್ಗೆ ಮರಳು ತುಂಬುತ್ತಿದ್ದ ವೇಳೆ ಮೇಲ್ಭಾಗದ ಮಣ್ಣು ಕುಸಿದು ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಸಮೀಪದ ಸಂತೇಶಿವರ ಕೆರೆಯಲ್ಲಿ ನಡೆದಿದೆ.
ಮಹಾಲಿಂಗೇಗೌಡ (35), ರುದ್ರಪ್ಪ (35) ಸಾವಿಗೀಡಾದವರು. ನಿನ್ನೆ ರಾತ್ರಿ ಟ್ರ್ಯಾಕ್ಟರ್ಗೆ ಮರಳು ತುಂಬುತ್ತಿದ್ದ ವೇಳೆ ಮೇಲ್ಭಾಗದ ಮಣ್ಣು ಕುಸಿದಿದೆ. ಇದರ ಪರಿಣಾಮ ಮಣ್ಣಿನಡಿ ಸಿಲುಕಿ ಇಬ್ಬರು ಸಾವಿಗೀಡಾಗಿದ್ದಾರೆ. ಮರಳು ದಂಧೆ ನಡೆಸುತ್ತಿದ್ದರು ಎನ್ನಲಾದ ರಘು ಮತ್ತು ಆತನ ಸಹಚರರು ಮೃತದೇಹಗಳನ್ನು ಹೊರ ತೆಗೆದು ಬಳಿಕ ಬಾಗೂರು ನವಿಲೆ ಸುರಂಗ ಸಮೀಪವಿರುವ ಪಕ್ಕದ ಕಾಲುವೆಗೆ ಹಾಕಿ ಪರಾರಿಯಾಗಿದ್ದರು ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮರಳು ಮಾಫಿಯಾದಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ನಾವು ಮೃತದೇಹಗಳನ್ನು ಹೊರತೆಗೆದಿದ್ದೇವೆ ಅಷ್ಟೇ. ಕೊಲೆ ಮಾಡಿಲ್ಲ ಎಂದು ರಘು ಮತ್ತು ಆತನ ಸಹಚರರು ತಿಳಿಸಿದ್ದಾರೆ. ಈ ಸಂಬಂಧ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನುಗ್ಗೆಹಳ್ಳಿ ಕೊರೊನಾ ವೈರಸ್ನಿಂದ ಸೀಲ್ ಡೌನ್ ಆಗಿರುವ ಪರಿಣಾಮ ಪ್ರಕರಣವನ್ನು ವೃತ್ತ ನಿರೀಕ್ಷಕರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.