ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿಕೆ ಹಾಸನ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಿಂದ ಆಯ್ಕೆಯಾದ ನಾಲ್ವರು ಶಾಸಕರು ಒಂದೆಡೆ ಕೂತು ಅಭ್ಯರ್ಥಿಯ ಆಯ್ಕೆ ವಿಚಾರ ಪ್ರಸ್ತಾಪಿಸಿ ನಂತರ ವರಿಷ್ಠರ ತೀರ್ಮಾನದಂತೆ ಚುನಾವಣೆ ಎದುರಿಸುತ್ತೇವೆ ಎಂದು ಎಚ್.ಡಿ. ರೇವಣ್ಣ ಹೇಳಿದರು.
ಹಾಸನದ ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಸೋಲು- ಗೆಲುವು ಸರ್ವೇ ಸಾಮಾನ್ಯ. ಅದಕ್ಕೆಲ್ಲ ನಾನು ಧೃತಿಗೆಡುವುದಿಲ್ಲ. ಜಿಲ್ಲಾ ರಾಜಕೀಯದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಅವರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಒಮ್ಮತದ ನಿರ್ಧಾರ ಮಾಡಿ ನಂತರ ವರಿಷ್ಠರ ತೀರ್ಮಾನದಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಕ್ಷ ಸಂಘಟನೆ ಮಾಡುವ ಕೆಲಸ ಮುಂದುವರಿಸುತ್ತೇವೆ ಎಂದರು.
ಹಲವು ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಮುಗಿಸಲು ಮುಂದಾಗಿವೆ. ಆದರೆ ಜಿಲ್ಲೆಯ ಜನರ ಆಶೀರ್ವಾದ ಪಕ್ಷದ ಮೇಲೆ ಇರುವುದರಿಂದ ಮತ್ತು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಆಡಳಿತದ ಅವಧಿಯಲ್ಲಿನ ಕೆಲಸ ಕಾರ್ಯಗಳನ್ನು ಮೆಚ್ಚಿ ನಮಗೆ ಮತ ಹಾಕುತ್ತಿದ್ದಾರೆ. ಅವರಿಗೆ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಹಾಸನ ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಅಥವಾ ಜಿಲ್ಲೆಯನ್ನು ಕಳೆದ ಸರ್ಕಾರದಂತೆ ನಿರ್ಲಕ್ಷ್ಯ ಮಾಡಿದರೆ, ನಾವು ಯಾವ ರೀತಿ ರಾಜಕೀಯ ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಈಗಾಗಲೇ ಒಂದೆಡೆ ಉಚಿತ ವಿದ್ಯುತ್ ನೀಡಿ, ಇನ್ನೊಂದೆಡೆ ಕೈಗಾರಿಕಾ ವಲಯಕ್ಕೆ ಮತ್ತು ಮಧ್ಯಮವರ್ಗದ ಜನರ ಮೇಲೆ ಮೂರು ಪಟ್ಟು ವಿದ್ಯುತ್ ಏರಿಕೆ ಮಾಡಿ ವಿದ್ಯುತ್ ಬಿಲ್ ಹೊರೆ ಹಾಕುತ್ತಿದೆ. ಸಂಸದರ ನಿವಾಸಕ್ಕೆ ಹಿಂದೆ 8,000 ಬಿಲ್ ಬರುತ್ತಿತ್ತು. ಈಗ 20,000 ಬಿಲ್ ಬರುತ್ತಿದೆ. ಅದೇ ರೀತಿ ಕಲ್ಯಾಣ ಮಂಟಪಕ್ಕೆ 75,000 ಬರುತ್ತಿದ್ದು, ಈಗ ಸುಮಾರು ಮೂರು ಲಕ್ಷದ ಬಿಲ್ ಬಂದಿರುವುದು ಕಲ್ಯಾಣ ಮಂಟಪದ ಮಾಲೀಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಈಗಾಗಲೇ ವಿದ್ಯುತ್ ಇಲಾಖೆ 48 ಸಾವಿರ ಕೋಟಿ ನಷ್ಟದಲ್ಲಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬಣ್ಣ ಹಾಕುವ ಕೆಲಸ ಮಾಡದೆ ಸರ್ಕಾರ ಎಲ್ಲರನ್ನು ಸಮಾನವಾಗಿ ನೋಡಬೇಕು. ನಾನು ಕೂಡ ಇಂಧನ ಸಚಿವನಾಗಿ ಕೆಲಸ ಮಾಡಿದ್ದು, ಇಷ್ಟೊಂದು ದುಬಾರಿಯಾಗಿ ವಿದ್ಯುತ್ ದರ ಏರಿಕೆ ಮಾಡಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೆಂಪೇಗೌಡ ಜಯಂತಿಗೆ ನಾನು ಬರಲು ಸಾಧ್ಯವಾಗಲಿಲ್ಲ. ಯಾಕೆಂದರೆ ನನ್ನ ಕ್ಷೇತ್ರದಲ್ಲೂ ಕೂಡ ಕಾರ್ಯಕ್ರಮ ಇತ್ತು. ಇದರಿಂದ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅವರು ರಾಜ್ಯ ಮಟ್ಟದ ಕಾರ್ಯಕ್ರಮ ಎಂದು ಹೇಳಿದ್ರು, ಆದರೆ ಪೂರ್ವಭಾವಿ ಸಭೆಗೆ ನನ್ನನ್ನು ಆಹ್ವಾನ ಮಾಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಕರೆದಿರಲಿಲ್ಲ. ಮುಂದಿನ ಕೆಡಿಪಿ ಮೀಟಿಂಗ್ ಕರೆದಾಗ ಭಾಗವಹಿಸುತ್ತೇನೆ ಎಂದರು.
ಏನೋ ಅಕ್ಕಿ ಕೊಡ್ತೀವಿ ಅಂತ ಹೇಳಿ ಹಣ ಕೊಡಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಕುಮಾರಸ್ವಾಮಿ ಅವರು ಹೇಳಿದ ಮಾತಿಗೆ ಯಾವತ್ತು ತಪ್ಪಿ ನಡೆದಿಲ್ಲ. ಸಾಲ ಮನ್ನಾ ಸೇರಿದಂತೆ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ. ನಮ್ಮ ಸರ್ಕಾರ ಬಂದಿದ್ದರೆ, ರೈತರ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೆವು ಎಂದರು.
ಇದನ್ನೂ ಓದಿ:ಕರ್ನಾಟಕದ ನೀರಾವರಿ ಯೋಜನೆಗಳಿಗೆ ತ್ವರಿತ ಮಂಜೂರಾತಿ ನೀಡಲು ಕೇಂದ್ರಕ್ಕೆ ಮನವಿ: ಡಿಸಿಎಂ ಡಿಕೆಶಿ