ಹಾಸನ: ಎರಡು ಚಿರತೆಗಳು ಸಾವಿಗೀಡಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ಕಲ್ಗುಂಡಿ ಗ್ರಾಮದ ಬಳಿ ಒಂದು ವರ್ಷದ ಎರಡು ಗಂಡು ಚಿರತೆಗಳು ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಅರಸೀಕೆರೆ ಬಳಿ ಎರಡು ಚಿರತೆಗಳ ಸಾವು... ಹಲವು ಅನುಮಾನಕ್ಕೆ ಎಡೆ - ಚಿರತೆಗಳ ಕಳೆಬರ ಪತ್ತೆ
ಅರಸೀಕೆರೆ ತಾಲೂಕಿನಲ್ಲಿ ಎರಡು ಚಿರತೆಗಳು ಸಾವನ್ನಪ್ಪಿದ್ದು, ಹಲವು ಅನುಮಾಗಳಿಗೆ ಎಡೆ ಮಾಡಿಕೊಟ್ಟಿದೆ.

ಈಗಾಗಲೇ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಗಳ ಕಳೆಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪಶುವೈದ್ಯಾಧಿಕಾರಿಗಳಾದ ಹರೀಶ್ ಮತ್ತು ವರದರಾಜ್ ಚಿರತೆಗಳ ಕಳೆಬರದ ಮರಣೋತ್ತರ ಪರೀಕ್ಷೆ ಮಾಡಿದ್ದು, ವರದಿ ಬಂದ ಬಳಿಕ ಸಾವಿನ ಸತ್ಯಾಂಶ ತಿಳಿಯಲಿದೆ.
ಇತ್ತೀಚಿನ ದಿನಗಳಲ್ಲಿ ಅರಸೀಕೆರೆ ಭಾಗದಲ್ಲೂ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಅರಸೀಕೆರೆ-ಚಿತ್ರದುರ್ಗ ರಾಜ್ಯ ಹೆದ್ದಾರಿ ಪಡುವನಹಳ್ಳಿ, ರಾಮೇನಹಳ್ಳಿ ಅರಣ್ಯದ ಬಳಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಅವುಗಳನ್ನು ಅರಣ್ಯಾಧಿಕಾರಿಗಳು ಹಿಡಿದು ಸ್ಥಳಾಂತರ ಮಾಡಿದ್ರು. ಬಳಿಕ ಅರಸೀಕೆರೆಯ ಬಾಣಾವರದ ಸಮೀಪ ಎರಡು ಚಿರತೆ ಮರಿಗಳು ಸಾವಿಗೀಡಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಚಿರತೆಗಳ ಹಾವಳಿಗಳನ್ನು ತಡೆಯಲು ಆಹಾರ ಪದಾರ್ಥಕ್ಕೆ ವಿಷ ಮಿಶ್ರಣ ಮಾಡಿ ಜಮೀನಿನಲ್ಲಿ ಇಟ್ಟಿರಬಹುದು. ಹೊಟ್ಟೆ ಹಸಿವಿನಿಂದ ಬಂದ ಚಿರತೆಗಳು ಆಹಾರ ತಿಂದು ಸಾವಿಗೀಡಾಗಿರುವ ಅನುಮಾನ ವ್ಯಕ್ತವಾಗಿದ್ದು, ಕೆಲವು ಸ್ಥಳೀಯರನ್ನು ಅರಣ್ಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.