ಹಾಸನ (ಅರಸೀಕೆರೆ):ನೋಡಿ ನಮ್ದು ರೈತರ ಪಕ್ಷ. ಪ್ರಾದೇಶಿಕ ಪಕ್ಷ ಇಲ್ಲದೇ ಒಂದು ರಾಜ್ಯ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ನಮ್ಮ ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನ ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ರೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಪಂಚರತ್ನ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡುತ್ತಾ, ರೈತರ ಮಕ್ಕಳಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಕಂಕಣ ಭಾಗ್ಯ ಕೂಡಿ ಬರಲಿ ಅಂತ ಅವಿವಾಹಿತ ರೈತ ಸಮುದಾಯದ ಯುವಕರು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ರೈತರು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ನಮ್ಮ ಪಂಚರತ್ನ ರಥಯಾತ್ರೆಯ ಪ್ರಣಾಳಿಕೆಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಿದ್ದು, ರೈತರ ಮಕ್ಕಳನ್ನ ಮದುವೆಯಾಗುವ ಯುವತಿಯರಿಗೆ 2 ಲಕ್ಷ ಪ್ರೋತ್ಸಾಹ ಧನ ನೀಡುವ ಮಹತ್ವದ ಯೋಜನೆಯನ್ನು ಜಾರಿಗೊಳಿಸುತ್ತೇನೆ ಎಂದು ಹೇಳಿದರು.
ಬಡವರ ಕಷ್ಟವನ್ನು ಗಮನಿಸಿದ್ದೇನೆ - ಹೆಚ್ಡಿಕೆ: ನಾವು ಅಧಿಕಾರದಲ್ಲಿ ಇರಲಿ ಅಥವಾ ಇರದೇ ಇರಲಿ, ನಾವು ಯಾವ ಕಾರ್ಯಕರ್ತರಿಗೂ ಒತ್ತಡ ಹಾಕಿಲ್ಲ. ಈಗ ಆರೋಪ ಮಾಡುವವರು ಮೊದಲು ಯಾಕೆ ಆರೋಪ ಮಾಡಲಿಲ್ಲ.? ನಮ್ಮ ಪಕ್ಷಕ್ಕೆ ಹಣದ ಕೊರತೆ ಇದೆ ನಿಜ. ಪಕ್ಷದ ಹಿತ ದೃಷ್ಟಿಗೆ ಯಾರೋ ನಾಲ್ಕು ಮಂದಿ ಪುಣ್ಯಾತ್ಮರು ಹಣವನ್ನು ನೀಡುತ್ತಾರೆ. ಆ ಹಣವನ್ನು ಇಟ್ಟುಕೊಂಡು ಸುಖ-ಮನೆ ಖರ್ಚು ಮಾಡಲು ಸಾಧ್ಯವಿಲ್ಲ. ಬಡವರ ಕಷ್ಟವನ್ನು ಗಮನಿಸಿದ್ದೇನೆ. ಅವರ ಕಷ್ಟವನ್ನು ನಿವಾರಣೆ ಮಾಡಲು ನಾನು ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ ಎಂದರು.
ಯಾವ ಪುರುಷಾರ್ಥಕ್ಕೆ ಮತ್ತೆ ಡಬಲ್ ಇಂಜಿನ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು? ನೀರಾವರಿ ಯೋಜನೆ ಏನೇನಾಗಿದೆ ಎಂಬುದು ನಿಮಗೆ ಗೊತ್ತಿದೆ. ಮಹದಾಯಿ ಯೋಜನೆ ನಾವು ಮಾಡ್ತೀವಿ ಅಂತ ಸಿಹಿ ಹಂಚಿಕೆ ಮಾಡಿದರು. ಕೆಲಸ ಪ್ರಾರಂಭವಾಯಿತಾ? ಎಂದು ಪ್ರಶ್ನಿಸಿದರು.