ಹಾಸನ: ಬೆಂಗಳೂರಿನಿಂದ ಹಾಸನಕ್ಕೆ ಬಂದಿದ್ದ ಮಹಿಳೆ ಮತ್ತು ಸತ್ಯಮಂಗಲದ ಪೊಲೀಸ್ ಪೇದೆಯೊಬ್ಬರಿಗೆ ಕೊರೊನಾ ಸೋಂಕು ಅಂಟಿದ ಹಿನ್ನೆಲೆಯಲ್ಲಿ ಎರಡು ಏರಿಯಾಗಳನ್ನು ಹಾಸನ ಜಿಲ್ಲಾಡಳಿತ ಸಂಪೂರ್ಣ ಸೀನ್ ಡೌನ್ ಮಾಡಿದೆ.
ಮಾರ್ಚ್ 22 ರಿಂದ ಮೇ 8ರ ತನಕ ಹಾಸನ ಜಿಲ್ಲೆ ಹಸಿರು ಮಯವಾಗಿತ್ತು. ಬಳಿಕ ಜಿಲ್ಲಾಡಳಿತ ಕೊಂಚ ಸಡಿಲಿಕೆ ನೀಡಿದ್ದರಿಂದ 48 ದಿನಗಳ ಕಾಲ ಹಸಿರು ಜಿಲ್ಲೆಯಾಗಿದ್ದ ಹಾಸನಕ್ಕೆ ಮುಂಬೈ ನಂಟು ಸಂಕಷ್ಟವನ್ನು ತಂದೊಡ್ಡಿದೆ. ದೂರದ ಮುಂಬೈಗೆ ಹೋಗಿದ್ದ ಹಾಸನ ಮೂಲದ ಕನ್ನಡಿಗರು ವಾಪಸ್ ಬರುವಾಗ ಕೊರೊನಾ ಹೆಮ್ಮಾರಿಯನ್ನು ಜೊತೆಯಲ್ಲೇ ಕರೆದುಕೊಂಡು ಬಂದಿದ್ದಾರೆ. ಈ ಹಿನ್ನೆಲೆ ಹಾಸನವನ್ನು ಕೆಂಪು ವಲಯವನ್ನಾಗಿ ಮಾಡಿದ್ದಾರೆ.
ಸದ್ಯ ಈಗ 85 ಪ್ರಕರಣಗಳು ದಾಖಲಾಗಿರುವ ಬೆನ್ನಲ್ಲಿಯೇ ಇಂದು ಮತ್ತೆ 2 ಪ್ರಕರಣ ದಾಖಲಾಗಿದ್ದು, ಈ ಎರಡು ಪ್ರಕರಣಗಳಿಂದ ಸಂಪೂರ್ಣ 2 ಬಡಾವಣೆ ಸೀಲ್ ಡೌನ್ ಆಗಿದೆ. ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಸಿ ಬಳಿಕ ಹಾಸನಕ್ಕೆ ಬಂದಿದ್ದ ಮಹಿಳೆ ತಪಾಸಣೆಗೆ ಒಳಪಡದೆ ಹಾಸನದ ಉತ್ತರ ಬಡಾವಣೆಯಲ್ಲಿ ಓಡಾಟ ಮಾಡಿದ್ದಾಳೆ. ಬಳಿಕ ಆಕೆಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಾಸನದ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿದೆ ಎಂದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಉತ್ತರ ಬಡಾವಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಸತ್ಯಮಂಗಲದ ಮೂಲದ ಕೆ ಎಸ್ ಆರ್ ಪಿ ಪೊಲೀಸ್ ಪೇದೆಯೊಬ್ಬರು ಹಾಸನದಿಂದ ಬೆಂಗಳೂರಿಗೆ ಹೋಗಿ ಬಂದಿದ್ದು, ಅವರಿಗೂ ಸಹ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸತ್ಯಮಂಗಲಏರಿಯಾವನ್ನು ಸೀಲ್ ಡೌನ್ ಮಾಡುವ ಮೂಲಕ ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.