ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯೋ ಹಾಸನಾಂಬೆ ದೇವಸ್ಥಾನದಲ್ಲಿ ನಿನ್ನೆ ಮಧ್ಯಾಹ್ನ 1:16 ಗಂಟೆಗೆ ಶಾಸ್ತ್ರೋಕ್ತವಾಗಿ ದೇಗುಲದ ಬಾಗಿಲು ಮುಚ್ಚಿದ್ದು, 13 ದಿನಗಳ ಕಾಲ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ.
ಹಾಸನಾಂಬೆ ದೇವಾಲಯದ ಹುಂಡಿ ಎಣಿಕೆ ಕಾರ್ಯ ಇನ್ನು, ಇಂದು ಬೆಳಿಗ್ಗೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, ಹುಂಡಿ ತೆಗೆದ ಕೂಡಲೇ ಎಲ್ಲರಿಗೂ ಕೆಲ ಅಚ್ಚರಿಯ ಸಂಗತಿಗಳು ಎದುರಾದವು. ದೇವರಿಗೆ ಬರೆದ ಪತ್ರಗಳು, ಕೋಟಾನೋಟು, ವಿದೇಶಿ ಹಣ ಎಲ್ಲವನ್ನೂ ಕಂಡು ಎಲ್ಲರು ಅಚ್ಚರಿಗೊಂಡರು. ಅಲ್ಲದೆ ಕೆಲ ಪತ್ರಗಳನ್ನು ಓದಿ ನಗೆಗಡಲಲ್ಲಿ ತೇಲಿದರು. ಕೆಲ ವರ್ಷಗಳಿಂದ ದೇವಾಲಯದ ಆದಾಯ ಕೋಟಿಗಳ ಗಡಿ ದಾಟಿದ್ದು, ನಿನ್ನೆಯವರೆಗೂ ಟಿಕೆಟ್ ಮೂಲಕ ಪಡೆದ ದರ್ಶನದಿಂದ 1.6 ಕೋಟಿ ರೂ. ಸಂಗ್ರಹವಾಗಿದೆ.
ಇನ್ನು ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಆಡಳಿತಾಧಿಕಾರಿ, ತಾಲೂಕು ತಹಶೀಲ್ದಾರ್, ಕಂದಾಯ ಇಲಾಖೆ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ, ಸ್ಕೌಟ್ಸ್ ಅಂಡ್ ಗೈಡ್ಸ್ ಸದಸ್ಯರು ಪಾಲ್ಗೊಂಡಿದ್ದರು. ಹುಂಡಿಯಲ್ಲಿ ಲಕ್ಷ ಲಕ್ಷ ಹಣದ ಜೊತೆಗೆ, ಪ್ರತಿ ವರ್ಷದಂತೆ ಸ್ವಾರಸ್ಯಕರ ಪತ್ರಗಳು ಪತ್ತೆಯಾಗಿದ್ದು ಅಚ್ಚರಿ ಮೂಡಿಸಿದವು. ಸರ್ಕಾರಿ ಕೆಲಸ ಕೊಡಿಸು, ನನ್ನನ್ನು ಸೆಲೆಬ್ರಿಟಿನ್ನಾಗಿ ಮಾಡು, ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಒಳ್ಳೆ ಅಂಕ ಬರಲಿ. ಸಾಲ ಕೊಟ್ಟ ಎಂಟು ಲಕ್ಷ ಹಣ ವಾಪಸ್ ಕೊಡಿಸು ಎಂದು ಬರೆದು ಹುಂಡಿಯಲ್ಲಿ ಹಾಕಿದ್ದಲ್ಲದೇ ನಾನಾ ಬೇಡಿಕೆಗಳ ಪತ್ರಗಳನ್ನ ಭಕ್ತರು ಹುಂಡಿಗೆ ಹಾಕಿದ್ದಾರೆ.
ಇನ್ನು ರಾಜ್ಯ, ಹೊರ ರಾಜ್ಯಗಳಿಂದ ಹಾಸನಾಂಬೆ ಭಕ್ತರು ದರ್ಶನ ಪಡೆದಿದ್ದು, ಇತ್ತೀಚಿನ ವರ್ಷಗಳಲ್ಲಿ ದೇವಾಲಯದ ಆದಾಯ ಕೂಡ ಕೋಟಿಗಳ ಗಡಿ ದಾಟುತ್ತಿದೆ. ಕಳೆದ ವರ್ಷ 2.65 ಕೋಟಿ ಆದಾಯ ಬಂದಿದ್ದು, ಟಿಕೆಟ್, ಪ್ರಸಾದ, ಲಾಡು ಮಾರಾಟ ಮತ್ತು ಹುಂಡಿ ಹಣ ಸೇರಿ ಕೋಟ್ಯಂತರ ರೂ. ಸಂಗ್ರಹವಾಗುತ್ತಿದೆ. ಇನ್ನು ಒಡವೆ-ವಸ್ತ್ರಗಳಿಂದ ಹರಕೆ ರೂಪದಲ್ಲಿಯೂ ಆದಾಯ ಬರುತ್ತಿದೆ.